ADVERTISEMENT

ಶಾಲಾ ವಿದ್ಯಾರ್ಥಿಗಳಿಗೆ ಕ್ರೀಡಾ ಕೃಪಾಂಕ ಪರಿಶೀಲನೆ: ಸಿಎಂ ಭರವಸೆ

ಮಿನಿ ಒಲಿಂಪಿಕ್ಸ್‌ಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2024, 16:26 IST
Last Updated 14 ನವೆಂಬರ್ 2024, 16:26 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಬೆಂಗಳೂರು: ಕ್ರೀಡೆಗಳಲ್ಲಿ ಭಾಗವಹಿಸುವ ಶಾಲಾ ಮಕ್ಕಳ ಪ್ರೋತ್ಸಾಹಕ್ಕೆ ಕೃಪಾಂಕ ನೀಡಬೇಕೆಂಬ ಬೇಡಿಕೆ ಬಗ್ಗೆ ಸರ್ಕಾರ ಸಕಾರಾತ್ಮಕವಾಗಿ ಪರಿಶೀಲಿಸಿ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ಭರವಸೆ ನೀಡಿದರು.

ಕಂಠೀರವ ಕ್ರೀಡಾಂಗಣದಲ್ಲಿ ಮೂರನೇ ಮಿನಿ ಒಲಿಂಪಿಕ್ಸ್‌ (14 ವರ್ಷದೊಳಗಿನವರ) ಕೂಟ  ಉದ್ಘಾಟಿಸಿ ಅವರು ಮಾತನಾಡಿದರು. ಪ್ರಾಸ್ತಾವಿಕ ಭಾಷಣದಲ್ಲಿ ಕರ್ನಾಟಕ ಒಲಿಂಪಿಕ್ ಸಂಸ್ಥೆ ಅಧ್ಯಕ್ಷ ಕೆ.ಗೋವಿಂದರಾಜ್ ಅವರು ಈ ಬಗ್ಗೆ ಬೇಡಿಕೆಯಿಟ್ಟಿದ್ದರು.

ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾಗವಹಿಸಿದವರಿಗೆ ಪೊಲೀಸ್ ಇಲಾಖೆಯಲ್ಲಿ ಶೇ 3 ಮತ್ತು ಇತರೆ ಇಲಾಖೆಗಳಲ್ಲಿ ಶೇ 2ರಷ್ಟು ಉದ್ಯೋಗ ಮೀಸಲಿಡಲಾಗಿದೆ. ಇದರಿಂದ ಸಾಕಷ್ಟು ಕ್ರೀಡಾಪಟುಗಳಿಗೆ ಅನುಕೂಲವಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.

ADVERTISEMENT

ಕ್ರೀಡಾಪಟುಗಳಾಗಲು ಬಯಸುವವರಿಗೆ ಪರಿಶ್ರಮ ಮತ್ತು ಉತ್ತಮ ತರಬೇತಿ ಅಗತ್ಯ. ಅವರಿಗೆ ಸರ್ಕಾರ ಮತ್ತು ಕ್ರೀಡಾ ಸಂಸ್ಥೆಗಳು ಅವಕಾಶಗಳನ್ನು ಕಲ್ಪಿಸಬೇಕು ಎಂದರು.

ಕೆಒಎ ಅಧ್ಯಕ್ಷ ಗೋವಿಂದರಾಜ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ನಡೆಯುತ್ತಿರುವ ಏಳು ದಿನಗಳ ಈ ಕ್ರೀಡಾಕೂಟದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಐದು ಸಾವಿರ ಕ್ರೀಡಾಪಟುಗಳು ಭಾಗವಹಿಸುತ್ತಿದ್ದಾರೆ. 

ಕೊಪ್ಪಳ ಜಿಲ್ಲೆಯ ವಾಲಿಬಾಲ್ ಆಟಗಾರ್ತಿ ಕಾವೇರಿ ಅವರು ಕ್ರೀಡಾಪಟುಗಳ ಪರ ಪ್ರಮಾಣ ಸ್ವೀಕರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.