ನವದೆಹಲಿ: ಭಾರತದ ಮೀರಾಬಾಯಿ ಚಾನು ಅವರು ಮುಂದಿನ ವಾರ ನಡೆಯಲಿರುವ ವಿಶ್ವ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಷಿಪ್‌ಗೆ ತೆರಳುವವರಾದರೂ, ಸ್ಪರ್ಧಿಸದಿರಲು ನಿರ್ಧರಿಸಿದ್ದಾರೆ.
ಏಷ್ಯನ್ ಗೇಮ್ಸ್‌ಗೆ ಆದ್ಯತೆ ನೀಡುವ ಉದ್ದೇಶದಿಂದ ಅವರು ಈ ತೀರ್ಮಾನಕ್ಕೆ ಬಂದಿದ್ದಾರೆ. ವಿಶ್ವ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಷಿಪ್ ಸೆ.4 ರಿಂದ ರಿಯಾದ್‌ನಲ್ಲಿ ನಡೆಯಲಿದೆ. ಹಾಂಗ್‌ಝೌ ಏಷ್ಯನ್ ಗೇಮ್ಸ್ ಸೆ.23 ರಂದು ಆರಂಭವಾಗಲಿದೆ. ಅಲ್ಪ ದಿನಗಳ ಅವಧಿಯಲ್ಲಿ ಇವೆರಡು ಕೂಟಗಳು ನಡೆಯಲಿವೆ.
‘ವಿಶ್ವ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಷಿಪ್ ಮುಂಬರುವ ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತಾ ಕೂಟವಾಗಿರುವುದರಿಂದ ಮೀರಾಬಾಯಿ ಕಡ್ಡಾಯವಾಗಿ ಪಾಲ್ಗೊಳ್ಳಬೇಕು. ಆದ್ದರಿಂದ ಅವರು ರಿಯಾದ್‌ಗೆ ತೆರಳುವರು. ದೇಹತೂಕ ಅಳೆಯುವುದು ಸೇರಿದಂತೆ ಸ್ಪರ್ಧೆಗೆ ಅಗತ್ಯವಿರುವ ಎಲ್ಲ ಪ್ರಕ್ರಿಯೆಗಳನ್ನು ಪೂರೈಸುವರು. ಆದರೆ ಅವರ ಸರದಿ ಬಂದಾಗ ಭಾರ ಎತ್ತುವುದಿಲ್ಲ’ ಎಂದು ಭಾರತ ತಂಡದ ಮುಖ್ಯ ಕೋಚ್ ವಿಜಯ್ ಶರ್ಮಾ ಹೇಳಿದರು.
49 ಕೆ.ಜಿ. ವಿಭಾಗದಲ್ಲಿ ಸ್ಪರ್ಧಿಸುವ ಮೀರಾಬಾಯಿ ಅವರು 2017ರ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಜಯಿಸಿದ್ದರು. ಏಷ್ಯಾ ಕಪ್ ಮುಂದಿರುವುದರಿಂದ ಅವರಿಗೆ ಈ ಬಾರಿಯ ಕೂಟದಿಂದ ಹಿಂದೆ ಸರಿಯಬಹುದಿತ್ತು. ಆದರೆ 2024ರ ಒಲಿಂಪಿಕ್ ಅರ್ಹತೆಯ ನಿಯಮದ ಪ್ರಕಾರ, ಸ್ಪರ್ಧಿಯು 2023ರ ವಿಶ್ವ ಚಾಂಪಿಯನ್‌ಷಿಪ್ ಮತ್ತು 2024ರ ವಿಶ್ವಕಪ್‌ನಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳಬೇಕಿದೆ.
ಅಂತರರಾಷ್ಟ್ರೀಯ ವೇಟ್‌ಲಿಫ್ಟಿಂಗ್ ಫೆಡರೇಷನ್ (ಐಡಬ್ಲ್ಯುಎಫ್) ನಿಯಮದ ಪ್ರಕಾರ, ಒಬ್ಬ ವೇಟ್‌ಲಿಫ್ಟರ್ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ತನ್ನ ಉಪಸ್ಥಿತಿಯನ್ನು ಖಾತರಿಪಡಿಸಲು ಸ್ಪರ್ಧೆಯ ವೇಳೆ ಭಾರ ಎತ್ತಬೇಕಿಲ್ಲ. ಆದರೆ ದೇಹತೂಕ ಅಳೆಯುವ ಪ್ರಕ್ರಿಯೆಯಲ್ಲಿ ಹಾಜರಿರಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.