ADVERTISEMENT

ಒಲಿಂಪಿಕ್ಸ್ ನಿಗದಿಯಂತೆ ನಡೆಯಲಿ: ವೇಟ್‌ಲಿಫ್ಟರ್‌ ಮೀರಾಬಾಯಿ ಚಾನು

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2020, 11:21 IST
Last Updated 22 ಮಾರ್ಚ್ 2020, 11:21 IST
ಮೀರಾಬಾಯಿ ಚಾನು
ಮೀರಾಬಾಯಿ ಚಾನು   

ನವದೆಹಲಿ: ಕೊರೊನಾ ಸೃಷ್ಣಿಸಿರುವ ತಲ್ಲಣದ ನಡುವೆಯೇ ಟೋಕಿಯೋ ಒಲಿಂಪಿಕ್‌ ಕ್ರೀಡಾಕೂಟ ನಿಗದಿತ ಸಮಯಕ್ಕೆ ನಡೆಸಬೇಕೇ ಬೇಡವೇ ಎಂಬ ಚರ್ಚೆ ಜೋರಾಗಿದೆ. ಇದೇ ವೇಳೆ ಭಾರತದ ವೇಟ್‌ಲಿಫ್ಟರ್‌ ಮೀರಾಬಾಯಿ ಚಾನು ಅವರು ನಿಗದಿತ ದಿನಾಂಕಗಳಂತೆ ಕೂಟ ನಡೆಯಲಿ ಎಂದಿದ್ದಾರೆ. ಒಂದು ವೇಳೆ ನಡೆಯದಿದ್ದರೆ ಮೊದಲ ಬಾರಿ ಪದಕ ಗೆಲ್ಲಲು ತಾನು ಪಡುತ್ತಿರುವ ಶ್ರಮ ವ್ಯರ್ಥವಾಗಲಿದೆ ಎಂದು ಅಳಲು ತೋಡಿಕೊಂಡಿದ್ದಾರೆ.

‘ಒಲಿಂಪಿಕ್ಸ್‌ ನಿಗದಿತ ಸಮಯಕ್ಕೆ ನಡೆಯಬೇಕು. ಟೂರ್ನಿಯು ರದ್ದಾಗಬಾರದು ಎಂದು ದೇವರಲ್ಲಿ ಕೇಳಿಕೊಳ್ಳುತ್ತೇನೆ. ಪದಕ ಗೆಲ್ಲುವ ಹಂಬಲದಲ್ಲಿದ್ದೇನೆ’ ಎಂದು ಮೀರಾಬಾಯಿ ಹೇಳಿದ್ದಾರೆ.

ಕೋವಿಡ್‌–19 ನಿಯಂತ್ರಣಕ್ಕೆ ಬರುವವರೆಗೆ ಒಲಿಂಪಿಕ್ಸ್‌ ನಡೆಸಬಾರದು ಎಂದು ಹಲವು ಅಥ್ಲೀಟುಗಳು ಒತ್ತಾಯಿಸುತ್ತಿದ್ದಾರೆ. ಸಾಮಾಜಿಕ ಅಂತರ ಕಾಯ್ದುಕೊಳ್ಳಿಎಂದು ವಿಶ್ವದಾದ್ಯಂತ ಸರ್ಕಾರಗಳು ಸಲಹೆ ನೀಡುತ್ತಿವೆ. ಆದರೆ ಅದೇ ವೇಳೆಯಲ್ಲೇತರಬೇತಿ ಮುಂದುವರಿಸಿ ಎಂದು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ಹೇಳುತ್ತಿರುವುದಕ್ಕೆ ಕ್ರೀಡಾಪಟುಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ADVERTISEMENT

ಮೀರಾಬಾಯಿ ಅವರ ಒಲಿಂಪಿಕ್ಸ್ ಪ್ರವೇಶ ಬಹುತೇಕ ಖಚಿತವಾಗಿದೆ. 203 ಕೆಜಿ (88+115) ಭಾರ ಎತ್ತಿರುವುದು ಅವರ ಶ್ರೇಷ್ಠ ಸಾಧನೆ. ಇದನ್ನು ಮೀರುವ ಹಂಬಲದಲ್ಲಿದ್ದಾರೆ.

‘ನಾನು ಏಷ್ಯನ್‌ ಚಾಂಪಿಯನ್‌ಷಿಪ್‌ಗೂ ಉತ್ತಮ ತಯಾರಿ ನಡೆಸಿದ್ದೆ. ಆದರೆ ಆ ಟೂರ್ನಿ ನಡೆಯುವ ಬಗ್ಗೆ ಅನಿಶ್ಚಿತತೆ ಮುಂದುವರಿದಿದೆ. ನಾನು ಈಗಾಗಲೇ ಒಲಿಂಪಿಕ್ಸ್ ಪ್ರವೇಶ ಪಡೆದಂತಾಗಿದೆ. ಇದರ ಸಂಪೂರ್ಣ ಚಿತ್ರಣ ಏಷ್ಯನ್‌ ಚಾಂಪಿಯನ್‌ಷಿಪ್‌ನಲ್ಲಿ ಸಿಗಲಿದೆ’ ಎಂದು ಮೀರಾಬಾಯಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.