ADVERTISEMENT

ಕಾಮನ್‌ವೆಲ್ತ್‌ ವೇಟ್‌ಲಿಫ್ಟಿಂಗ್: ಚಿನ್ನ ಗೆದ್ದ ಮೀರಾಬಾಯಿ ಚಾನು

ಮೊದಲ ದಿನ ಭಾರತಕ್ಕೆ 13 ಪದಕ

ಪಿಟಿಐ
Published 9 ಜುಲೈ 2019, 20:14 IST
Last Updated 9 ಜುಲೈ 2019, 20:14 IST
ಮೀರಾಬಾಯಿ ಚಾನು– ಪಿಟಿಐ ಚಿತ್ರ
ಮೀರಾಬಾಯಿ ಚಾನು– ಪಿಟಿಐ ಚಿತ್ರ   

ಅಪಿಯಾ, ಸಮೊವಾ: ಮೀರಾಬಾಯಿ ಚಾನು ಅವರು ಕಾಮನ್‌ವೆಲ್ತ್‌ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಮಂಗಳವಾರ ಚಿನ್ನ ಗೆಲ್ಲುವ ಮೂಲಕ ಭಾರತದ ಅಭಿಯಾನ ಆರಂಭಿಸಿದರು.

ಕೂಟದ ಮೊದಲ ದಿನ ಭಾರತದ ಸ್ಪರ್ಧಿಗಳು ಎಲ್ಲ ವಿಭಾಗಗಳು ಸೇರಿ ಒಟ್ಟು 13 ಪದಕಗಳನ್ನು ಬಾಚಿಕೊಂಡಿದ್ದಾರೆ. ಅದರಲ್ಲಿ ಎಂಟು ಚಿನ್ನ, ಮೂರು ಬೆಳ್ಳಿ ಹಾಗೂ ಎರಡು ಕಂಚಿನ ಪದಕಗಳು. ಮಹಿಳೆಯರ 49 ಕೆಜಿ ವಿಭಾಗದಲ್ಲಿ ಮೀರಾಬಾಯಿ 191 ಕೆಜಿ (84 +107 ಕೆಜಿ) ಭಾರ ಎತ್ತುವ ಮೂಲಕ ಚಿನ್ನಕ್ಕೆ ಕೊರಳೊಡ್ಡಿದರು. ಇದು ಒಲಿಂಪಿಕ್‌ ಅರ್ಹತಾ ಸ್ಪರ್ಧೆ.

ಮೀರಾಬಾಯಿ ಅವರು ಈ ವರ್ಷದ ಎಪ್ರಿಲ್‌ನಲ್ಲಿ ಚೀನಾದ ನಿಂಗ್‌ಬೊದಲ್ಲಿ ನಡೆದ ಏಷ್ಯನ್‌ ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸಿದ್ದರು. ಅಲ್ಲಿ 199 ಕೆಜಿ (86 + 113 ಕೆಜಿ) ಭಾರ ಎತ್ತಿದ್ದರೂ ಅಲ್ಪ ಅಂತರದಲ್ಲಿ ಪದಕ ವಂಚಿತರಾಗಿದ್ದರು.

ADVERTISEMENT

ಮಹಿಳೆಯರ 45 ಕೆಜಿ ವಿಭಾಗದಲ್ಲಿ ಜಿಲ್ಲಿ ದಲಬೆಹ್ರಾ ಕೂಡ ಪ್ರಥಮ ಸ್ಥಾನ ಗಳಿಸುವ ಮೂಲಕ ಚಿನ್ನ ಗೆದ್ದರು. ಅವರು ಒಟ್ಟು 154 ಕೆಜಿ (70+94 ಕೆಜಿ) ಭಾರ ಎತ್ತಿದರು. ಆದರೆ 45 ಕೆಜಿ ವಿಭಾಗಕ್ಕೆ ಒಲಿಂಪಿಕ್‌ನಲ್ಲಿ ಅವಕಾಶ ಇಲ್ಲ. 55 ಕೆಜಿ ವಿಭಾಗದಲ್ಲಿ ಸೊರೊಯಿಕೈಬಂ ಬಿಂದ್ಯಾರಾಣಿ ದೇವಿ ಹಾಗೂ ಮಾತ್ಸಾ ಸಂತೋಷಿ ಕ್ರಮವಾಗಿ ಚಿನ್ನ ಹಾಗೂ ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು.

ಸ್ನ್ಯಾಚ್‌ನಲ್ಲಿ 78 ಕೆಜಿ ಭಾರ ಎತ್ತಿದ ಅವರು ಕ್ಲೀನ್‌ ಆ್ಯಂಡ್‌ ಜೆರ್ಕ್‌ ವಿಭಾಗದಲ್ಲಿ 105 ಕೆಜಿ ಎತ್ತುವ ಮೂಲಕ ಚಿನ್ನದ ಪದಕ ಗೆದ್ದರು. ಇನ್ನೊಂದೆಡೆ ಸಂತೋಷಿ ಅವರು ಸ್ನ್ಯಾಚ್‌ನಲ್ಲಿ 80 ಹಾಗೂ ಕ್ಲೀನ್‌ ಆ್ಯಂಡ್‌ ಜೆರ್ಕ್‌ ವಿಭಾಗದಲ್ಲಿ 102 ಕೆಜಿ ಮಾತ್ರ ಭಾರ ಎತ್ತುವಲ್ಲಿ ಸಫಲರಾದರು.

ಪುರುಷರ 55 ಕೆಜಿ ವಿಭಾಗದಲ್ಲಿ ಭಾರತದ ರಿಷಿಕಾಂತ್‌ ಸಿಂಗ್‌ 235 ಕೆಜಿ (105 + 130 ಕೆಜಿ) ಭಾರ ಎತ್ತುವಲ್ಲಿ ಯಶಸ್ವಿಯಾಗಿ ಸ್ವರ್ಣ ಪದಕದ ಸಾಧನೆ ಮಾಡಿದರು.

2020ರ ಟೋಕಿಯೊ ಒಲಿಂಪಿಕ್ಸ್‌ನ ಅರ್ಹತಾ ಪ್ರಕ್ರಿಯೆಯು 18 ತಿಂಗಳಲ್ಲಿ ನಡೆಯುವ ಆರು ವೇಟ್‌ಲಿಫ್ಟಿಂಗ್‌ ಟೂರ್ನಿಗಳಲ್ಲಿ ತೋರುವ ಪ್ರದರ್ಶನವನ್ನು ಆಧರಿಸಿರುತ್ತದೆ. ವೇಟ್‌ಲಿಫ್ಟರ್‌ಗಳ ನಾಲ್ಕು ಶ್ರೇಷ್ಠ ಫಲಿತಾಂಶಗಳನ್ನು ಪರಿಗಣಿಸಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.