ನವದೆಹಲಿ: 2036ರ ಒಲಿಂಪಿಕ್ಸ್ ಮತ್ತು ಪ್ಯಾರಾಲಿಂಪಿಕ್ಸ್ ಆತಿಥ್ಯ ವಹಿಸುವ ಬಯಕೆ ವ್ಯಕ್ತಪಡಿಸಿ ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯ ‘ಭವಿಷ್ಯದ ಆತಿಥ್ಯ ಆಯ್ಕೆ ಆಯೋಗ’ಕ್ಕೆ (ಫ್ಯೂಚರ್ ಹೋಸ್ಟ್ ಕಮಿಷನ್) ಭಾರತವು ‘ಆಸಕ್ತಿ ಪತ್ರ’ ಸಲ್ಲಿಸಿದೆ.
ಐಒಸಿ ಜೊತೆ ತಿಂಗಳುಗಳ ಕಾಲ ಅನೌಪಚಾರಿಕ ಮಾತುಕತೆಗಳ ನಂತರ ಭಾರತ ಒಲಿಂಪಿಕ್ ಸಂಸ್ಥೆಯು (ಐಒಎ) ಅಕ್ಟೋಬರ್ 1ರಂದು ಈ ಪತ್ರವನ್ನು ಸಲ್ಲಿಸಿದೆ ಎಂದು ಕ್ರೀಡಾ ಸಚಿವಾಲಯದ ಮೂಲವೊಂದು ತಿಳಿಸಿದೆ. ಆ ಮೂಲಕ ಆತಿಥ್ಯ ವಹಿಸುವ ಪ್ರಯತ್ನದಲ್ಲಿ ಮೊದಲ ಹೆಜ್ಜೆ ಇಟ್ಟಿದೆ.
‘ಈ ಬೃಹತ್ ಅವಕಾಶವು, ಭಾರಿ ಪ್ರಮಾಣದಲ್ಲಿ ಅನುಕೂಲಗಳನ್ನು ಮಾಡಿಕೊಡಲಿದೆ. ದೇಶದ ಆರ್ಥಿಕ ಪ್ರಗತಿ, ಸಾಮಾಜಿಕ ಉನ್ನತಿ ಮತ್ತು ಯುವ ಸಬಲೀಕರಣಕ್ಕೆ ಅನುವು ಮಾಡಿಕೊಡಲಿದೆ’ ಎಂದು ಮೂಲ ತಿಳಿಸಿದೆ.
2036ರ ಒಲಿಂಪಿಕ್ಸ್ ಆತಿಥ್ಯ ವಹಿಸುವ ಸರ್ಕಾರದ ಬಯಕೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ವರ್ಷ ಮೊದಲ ಬಾರಿ ವ್ಯಕ್ತಪಡಿಸಿದ್ದರು.
ಮುಂದಿನ ವರ್ಷದ ಐಒಸಿ ಚುನಾವಣೆಯ ಬಳಿಕವಷ್ಟೇ ಆತಿಥ್ಯ ನಿರ್ಧಾರ ಆಗಲಿದೆ. ಸೌದಿ ಅರೇಬಿಯಾ, ಕತಾರ್ ಮತ್ತು ಟರ್ಕಿ ಸಹ 2036ರ ಕ್ರೀಡೆಗಳ ಆತಿಥ್ಯ ವಹಿಸಲು ಭಾರತಕ್ಕೆ ಪೈಪೋಟಿ ನೀಡಲಿವೆ.
ಆತಿಥ್ಯ ನಿರ್ಧರಿಸುವ ಮೊದಲು ಪೈಪೋಟಿಯಲ್ಲಿರುವ ರಾಷ್ಟ್ರಗಳಲ್ಲಿ ಐಒಸಿಯು ಕಾರ್ಯಸಾಧ್ಯತಾ ಅಧ್ಯಯನ ಕೈಗೊಳ್ಳಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.