ADVERTISEMENT

ಚೆಸ್ ಟೂರ್ನಿ: ಮಿತ್ರಬಾ ಗುಹಾ ಚಾಂಪಿಯನ್

​ಪ್ರಜಾವಾಣಿ ವಾರ್ತೆ
Published 26 ಜನವರಿ 2024, 20:23 IST
Last Updated 26 ಜನವರಿ 2024, 20:23 IST
<div class="paragraphs"><p>ಬೆಂಗಳೂರು ಇಂಟರ್‌ನ್ಯಾಷನಲ್ ಗ್ರ್ಯಾಂಡ್ ಮಾಸ್ಟರ್ಸ್ ಚೆಸ್ ಟೂರ್ನಿಯಲ್ಲಿ ಪ್ರಥಮ ಸ್ಥಾನ ಪಡೆದ ಮಿತ್ರಬಾ ಗುಹಾ (ಮಧ್ಯದಲ್ಲಿರುವವರು), ನೈಜೆಲ್ ಶಾರ್ಟ್‌ (ಎಡ) ಮತ್ತು ಎಸ್.ಪಿ.ಸೇತುರಾಮನ್ (ಬಲ)</p></div>

ಬೆಂಗಳೂರು ಇಂಟರ್‌ನ್ಯಾಷನಲ್ ಗ್ರ್ಯಾಂಡ್ ಮಾಸ್ಟರ್ಸ್ ಚೆಸ್ ಟೂರ್ನಿಯಲ್ಲಿ ಪ್ರಥಮ ಸ್ಥಾನ ಪಡೆದ ಮಿತ್ರಬಾ ಗುಹಾ (ಮಧ್ಯದಲ್ಲಿರುವವರು), ನೈಜೆಲ್ ಶಾರ್ಟ್‌ (ಎಡ) ಮತ್ತು ಎಸ್.ಪಿ.ಸೇತುರಾಮನ್ (ಬಲ)

   

–ಪ್ರಜಾವಾಣಿ ಚಿತ್ರ

ಬೆಂಗಳೂರು: ಪಶ್ಚಿಮ ಬಂಗಾಳದ ಗ್ರ್ಯಾಂಡ್ ಮಾಸ್ಟರ್‌ ಮಿತ್ರಬಾ ಗುಹಾ ಅವರು ಬೆಂಗಳೂರು ಇಂಟರ್‌ನ್ಯಾಷನಲ್ ಗ್ರ್ಯಾಂಡ್ ಮಾಸ್ಟರ್ಸ್ ಚೆಸ್ ಟೂರ್ನಿಯ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.

ADVERTISEMENT

ರಾಷ್ಟ್ರೀಯ ಚಾಂಪಿಯನ್ ಎಸ್.ಪಿ.ಸೇತುರಾಮನ್  ಹಾಗೂ ಇಂಗ್ಲೆಂಡ್‌ನ ನೈಜೆಲ್ ಶಾರ್ಟ್ ಕ್ರಮವಾಗಿ ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದರು.  

ಟೂರ್ನಿಯ ಅಂತಿಮ 10ನೇ ಸುತ್ತಿನಲ್ಲಿ ಮಿತ್ರಬಾ ಗುಹಾ ಅವರು ಜಿ.ಎಂ ಶ್ಯಾಮ್ ಸುಂದರ್ (ತಮಿಳುನಾಡು) ವಿರುದ್ಧ ಗೆದ್ದು ಪ್ರಶಸ್ತಿ ಸನಿಹ ಬಂದರು. ಈ ಮಧ್ಯೆ ಎಸ್. ಪಿ. ಸೇತುರಾಮನ್ ಅವರು ಸಹ ಅಂತಿಮ ಸುತ್ತಿನಲ್ಲಿ ಜಿ.ಎಂ. ದೀಪ್ತಾಯನ ಘೋಷ್ ಎದುರು ಡ್ರಾ ಸಾಧಿಸಿದರು.

ಇದರೊಂದಿಗೆ ಸೇತುರಾಮನ್ ಮತ್ತು ಗುಹಾ ತಲಾ 8 ಅಂಕ ಗಳಿಸಿದರು. ನಂತರ ನಡೆದ ಟೈ ಬ್ರೇಕ್ ಕಟ್-ಆಫ್‌ ಗಳಲ್ಲಿ ಗುಹಾ ಅವರು ಹೆಚ್ಚು ಅಂಕ ಪಡೆದು ಪ್ರಶಸ್ತಿ ಗೆದ್ದರು.

ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಬೆಂಗಳೂರು ನಗರ ಜಿಲ್ಲಾ ಚೆಸ್ ಸಂಸ್ಥೆ ಆಶ್ರಯದಲ್ಲಿ ನಡೆದ ಟೂರ್ನಿಯಲ್ಲಿ ಮಿತ್ರಬಾ ಅವರು ಟ್ರೋಫಿ ಜತೆ ₹4.50 ಲಕ್ಷ ನಗದು ಬಹುಮಾನ ಪಡೆದರು. ತಮಿಳುನಾಡಿನ ಸೇತುರಾಮನ್ ಹಾಗೂ ಇಂಗ್ಲೆಂಡ್‌ನ ನೈಜೆಲ್ ಶಾರ್ಟ್ ಅವರು ಟ್ರೋಫಿಗಳ ಜತೆಗೆ ಕ್ರಮವಾಗಿ ₹3 ಲಕ್ಷ ಹಾಗೂ ₹2.50 ಲಕ್ಷ ಬಹುಮಾನ ಜೇಬಿಗಿಳಿಸಿದರು. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ವಿಜೇತರಿಗೆ ಬಹುಮಾನ ವಿತರಿಸಿದರು.

ಶಾರ್ಟ್‌,  ಪ್ರಣವ್‌ ಆನಂದ್, ಅರೋಣ್ಯಕ್ ಘೋಷ್, ನೀಲೇಶ್ ಸಹಾ,  ಸಂದೀಪನ್ ಚಂದಾ, ದೀಪ್ತಾಯನ ಘೋಷ್‌, ನೀಲೋತ್ಪಲ್ ದಾಸ್ ಮತ್ತು ಎಲ್‌.ಆರ್.ಶ್ರೀಹರಿ ತಲಾ 7.5 ಅಂಕ ಗಳಿಸಿದ್ದರು. ಹಾಗಾಗಿ 2 ಮತ್ತು 8ರವರೆಗಿನ ಸ್ಕಾನಕ್ಕಾಗಿ ಈ ಆಟಗಾರರ ಮಧ್ಯೆ ಟೈಬ್ರೇಕರ್ ನಡೆಯಿತು.

ಯುವ ಆಟಗಾರ ಶ್ರೀಹರಿ ಅವರು  ಶಾರ್ಟ್ ವಿರುದ್ಧ ಡ್ರಾ ಸಾಧಿಸಿದರೆ, ನೀಲೋತ್ಪಲ್ ಅವರು ಪಿ. ಇನಿಯನ್ ಅವರನ್ನು  ಹಾಗೂ ಪ್ರಣವ್ ಆನಂದ್ ಅವರು ಅಮೇಯಾ ಆಡಿ ಅವರನ್ನು ಮಣಿಸಿದರು. ಸೇತುರಾಮನ್ ಮತ್ತು ಘೋಷ್ ನಡುವಿನ ಪಂದ್ಯ 30 ನಡೆಗಳ ನಂತರ ಡ್ರಾದಲ್ಲಿ ಕೊನೆಗೊಂಡಿತು.

ನೀಲೇಶ್‌ ‌ಸಹಾ ಅವರು ಇಂಟರ್‌ನ್ಯಾಷನಲ್‌ ನಾರ್ಮ್ ಗಳಿಸಿದರೆ,  ಪುಷ್ಕರ್ ಡೆರೆ, ಕೇರಳದ ನಿತಿನ್ ಬಾಬು, ದಾಯೆವಿಕ್ ವಾಧವನ್ ಮತ್ತು ಸಾತ್ವಿಕ್ ಅಡಿಗ ಅವರು ಇಂಟರ್‌ನ್ಯಾಷನಲ್ ಮಾಸ್ಟರ್‌ ಬಿರುದು ಗಳಿಸಿದರು. ಮಹಿಳಾ ವಿಭಾಗದಲ್ಲಿ ಜಿ. ಲಾಸ್ಯ ವುಮೆನ್ ಇಂಟರ್‌ ನ್ಯಾಷನಲ್‌ ಮಾಸ್ಟರ್‌ ನಾರ್ಮ್ ಗಳಿಸಿದರು.

₹ 55 ಲಕ್ಷ ಮೊತ್ತದ ಈ  ಟೂರ್ನಿಯಲ್ಲಿ 32 ಗ್ರ್ಯಾಂಡ್‌ ಮಾಸ್ಟರ್‌ಗಳ ಜೊತೆಗೆ ಒಬ್ಬರು ಡಬ್ಲ್ಯುಜಿಎಂ, 28 ಇಂಟರ್‌ನ್ಯಾಷನಲ್ ಮಾಸ್ಟರ್ಸ್‌ ಸೇರಿದಂತೆ 16 ದೇಶಗಳ 476 ಆಟಗಾರರು ಕಣದಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.