ADVERTISEMENT

ಬ್ಯಾಸ್ಕೆಟ್‌ ಬಾಲ್: ಕೋರಮಂಗಲಕ್ಕೆ ಮಿಶ್ರ ಫಲ

​ಪ್ರಜಾವಾಣಿ ವಾರ್ತೆ
Published 13 ಜೂನ್ 2019, 20:01 IST
Last Updated 13 ಜೂನ್ 2019, 20:01 IST

ಬೆಂಗಳೂರು: ಕೋರಮಂಗಲ ಸ್ಪೋರ್ಟ್ಸ್ ಕ್ಲಬ್ ತಂಡ ರಾಜ್ಯ ‘ಬಿ’ ಡಿವಿಷನ್ ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಗುರುವಾರ ಮಿಶ್ರ ಫಲ ಅನುಭವಿಸಿತು.

ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ಬೆಳಿಗ್ಗೆ ನಡೆದ ಪಂದ್ಯದಲ್ಲಿ ಕೆಎಸ್‌ಪಿ ತಂಡವನ್ನು ಮಣಿಸಿದ ತಂಡ ಸಂಜೆ ರಾಜಮಹಲ್‌ ಬ್ಯಾಸ್ಕೆಟ್‌ಬಾಲ್ ಕ್ಲಬ್‌ಗೆ ಮಣಿಯಿತು.

ಕೆಎಸ್‌ಪಿ ಎದುರಿನ ಪಂದ್ಯದಲ್ಲಿ ಕ್ಯಾರಿ (14 ಪಾಯಿಂಟ್ಸ್‌) ಮತ್ತು ಅಬಿಶುವಾ (12 ಪಾಯಿಂಟ್ಸ್‌) ಅವರ ಅಮೋಘ ಆಟದ ಬಲದಿಂದ ಕೋರಮಂಗಲ ತಂಡ 66–27ರಿಂದ ಗೆದ್ದಿತು. ಆರಂಭದಿಂದಲೇ ಎದುರಾಳಿ ತಂಡವನ್ನು ಕಂಗೆಡಿಸಿ ಪಾಯಿಂಟ್‌ಗಳನ್ನು ಕಲೆ ಹಾಕಿದ ತಂಡ ಮೊದಲಾರ್ಧದಲ್ಲಿ 34–18ರ ಮುನ್ನಡೆ ಸಾಧಿಸಿತ್ತು. ದ್ವಿತೀಯಾರ್ಧದಲ್ಲಿ ತಿರುಗೇಟು ನೀಡಲು ಪ್ರಯತ್ನಿಸಿದ ಕೆಎಸ್‌ಪಿ ತಂಡಕ್ಕೆ ಕೇವಲ ಒಂಬತ್ತು ಪಾಯಿಂಟ್ ಮಾತ್ರ ಗಳಿಸಿತು.

ADVERTISEMENT

ಮತ್ತೊಂದು ಪಂದ್ಯದಲ್ಲಿ ಎನ್‌ಜಿವಿ ಬ್ಯಾಸ್ಕೆಟ್‌ಬಾಲ್ ಕ್ಲಬ್ ತಂಡ ರಾಜಮಹಲ್ ಕ್ಲಬ್‌ ವಿರುದ್ಧ 69–61ರಿಂದ ಗೆದ್ದಿತು. ವಿಜಯಿ ತಂಡದ ಪರ ರಜತ್ 22, ಗೋಕುಲ್ 19 ಪಾಯಿಂಟ್ ಗಳಿಸಿದರು. ರಾಜಮಹಲ್ ಪರ ಗುರು 12 ಮತ್ತು ಮಂದಾರ್ 11 ಪಾಯಿಂಟ್ ಕಲೆ ಹಾಕಿದರು. ಬೆಳಿಗ್ಗೆ ಸೋತರೂ ಸಂಜೆಯ ಪಂದ್ಯದಲ್ಲಿ ಕೆಎಸ್‌ಪಿ 59–23ರಿಂದ ಮೈಸೂರಿನ ಪ್ರೋಟೆಕ್ ಅಸೋಸಿಯೇಷನ್ ತಂಡವನ್ನು ಮಣಿಸಿತು. ಕೆಎಸ್‌ಪಿಗೆ ಲಕ್ಷ್ಮಣ್ ಗಸ್ತಿ 35 ಮತ್ತು ಶ್ರೀರಕ್ಷಾ 10 ಪಾಯಿಂಟ್ ತಂದುಕೊಟ್ಟರು. ಪ್ರೋಟೆಕ್ ಪರ ಕಾರ್ತಿಕ್ 10 ಪಾಯಿಂಟ್ ಗಳಿಸಿದರು. ಕೋರಮಂಗಲ ಎಸ್‌ಸಿ ವಿರುದ್ಧದ ಪಂದ್ಯದಲ್ಲಿ ರಾಜಮಹಲ್ 85–49ರಿಂದ ಗೆದ್ದಿತು. ರಾಜಮಹಲ್‌ಗಾಗಿ ಗುರು 28 ಮತ್ತು ಗೌತಮ್ 26 ಪಾಯಿಂಟ್ ಗಳಿಸಿದರು. ಕೋರಮಂಗಲಕ್ಕೆ ಅಭಿಷೇಕ್ ಜಾನ್ 21 ಮತ್ತು ನರಸಿಂಹನ್ 9 ಪಾಯಿಂಟ್ ತಂದುಕೊಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.