ಮಿಜೋರಾಂ: ವಾಲಿಬಾಲ್ ಪಂದ್ಯದ ವಿರಾಮದ ವೇಳೆ ಆಟಗಾರ್ತಿಯೊಬ್ಬರು ತನ್ನ ಮಗುವಿಗೆ ಎದೆಹಾಲು ಉಣಿಸುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಸ್ತನಪಾನ ಮಾಡಿಸುತ್ತಿರುವ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಮಿಜೋರಾಂನಲ್ಲಿ ಸೋಮವಾರ ನಡೆದ ರಾಜ್ಯಮಟ್ಟದ ಕ್ರೀಡಾಕೂಟದ ಪಂದ್ಯ ವಿರಾಮದ ವೇಳೆ ಟುಯುಕುಮ್ ವಾಲಿಬಾಲ್ ತಂಡದ ಆಟಗಾರ್ತಿ ಲಾಲ್ವೆಂಟ್ಲುವಾಂಗಿ ತನ್ನ ಏಳು ತಿಂಗಳ ಮಗುವಿಗೆ ಎದೆಹಾಲು ಉಣಿಸಿದ್ದರು. ಇದೇ ವೇಳೆ ಕ್ಯಾಮೆರಾದಲ್ಲಿ ಸೆರೆಯಾದ ಫೋಟೊಗಳನ್ನು ನೆಟ್ಟಿಗರು ಹಂಚಿಕೊಂಡಿದ್ದಾರೆ.
ಲಾಲ್ವೆಂಟ್ಲುವಾಂಗಿ ಒಬ್ಬ ತಾಯಿಯಾಗಿ ಮತ್ತು ಆಟಗಾರ್ತಿಯಾಗಿ ತಮ್ಮ ಕರ್ತವ್ಯವನ್ನು ಪಾಲಿಸಿದ್ದಾರೆ ಎಂದು ಹಲವರು ಪ್ರತಿಕ್ರಿಯಿಸಿದ್ದಾರೆ.
ಆಟಗಾರ್ತಿಯ ಬದ್ಧತೆಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಮಿಜೋರಾಂ ಕ್ರೀಡಾ ಸಚಿವ ರಾಬರ್ಟ್ ರೊಮಾವಿಯಾ ರಾಯ್ಟೆ, ₹10 ಸಾವಿರ ಮೊತ್ತದ ಪ್ರೋತ್ಸಾಹ ಧನ ನೀಡುವುದಾಗಿ ಘೋಷಿಸಿದ್ದಾರೆ.
ನೆಟ್ಟಿಗರು ಈ ಘಟನೆ ಬಗ್ಗೆ 'ತಾಯಿ ಪ್ರೀತಿಗೆ ಇದುಅತ್ಯುತ್ತಮ ಉದಾಹರಣೆ' ಎಂದು ಶ್ಲಾಘಿಸಿದ್ದಾರೆ. ಜೊತೆಗೆ, ಮಹಿಳೆಯರು ತಮ್ಮ ವೃತ್ತಿಪರ ಮತ್ತು ವೈಯಕ್ತಿಕ ಜೀವನವನ್ನು ಹೇಗೆ ನಿಭಾಯಿಸುತ್ತಾರೆ ಎನ್ನುವುದಕ್ಕೆ ಇದುವೇ ಸ್ಪಷ್ಟ ನಿದರ್ಶನ ಎಂದು ಕೊಂಡಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.