ನವದೆಹಲಿ : ಧನಸಹಾಯ ನೀಡುವಂತೆ ಮತ್ತು ತಮ್ಮ ಸ್ಟ್ರೆಂತ್ ಮತ್ತು ಕಂಡಿಷನಿಂಗ್ ಕೋಚ್ ಕಾಝಿ ಕಿರೊನ್ ಮುಸ್ತಾಫ ಹಸನ್ ಅವರ ಅವಧಿಯನ್ನು ಮೇ ತಿಂಗಳ ಕೊನೆಯವರೆಗೆ ವಿಸ್ತರಿಸುವಂತೆ ಅಂತರರಾಷ್ಟ್ರೀಯ ಕುಸ್ತಿಪಟು ಬಜರಂಗ್ ಪೂನಿಯಾ ಸಲ್ಲಿಸಿರುವ ಮನವಿಗೆ ಕೇಂದ್ರ ಕ್ರೀಡಾ ಸಚಿವಾಲಯ ಸಮ್ಮತಿ ನೀಡಿದೆ.
ಬಜರಂಗ್ ಈ ವರ್ಷದ ಒಲಿಂಪಿಕ್ ರೇಸ್‌ನಿಂದ ಹೊರಬಿದ್ದಿದ್ದಾರೆ.
ಪೂನಿಯಾ ಅವರು ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿದ್ದ ಕುಸ್ತಿ ಫೆಡರೇಷನ್ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ದೀರ್ಘ ಹೋರಾಟದ ಭಾಗವಾಗಿದ್ದರು.
ಇತ್ತೀಚೆಗೆ ಏಷ್ಯನ್ ಚಾಂಪಿಯನ್‌ಷಿಪ್ ಮತ್ತು ಏಷ್ಯನ್ ಒಲಿಂಪಿಕ್ ಕ್ವಾಲಿಫೈರ್ಸ್‌ಗೆ ನಡೆದ ಟೂರ್ನಿಯಲ್ಲಿ 30 ವರ್ಷದ ಬಜರಂಗ್. ಅಗ್ರ ನಾಲ್ಕರಲ್ಲಿ ಸ್ಥಾನ ಗಳಿಸಲು ವಿಫಲರಾಗಿದ್ದರು.
ಒಲಿಂಪಿಕ್ಸ್‌ಗೆ ಮೊದಲು ಚೀನಾ ತೈಪಿಯಲ್ಲಿ ತರಬೇತಿಗೆ ಹಣಕಾಸು ನೆರವು ನೀಡುವಂತೆ ಕಾಮನ್ವೆಲ್ತ್ ಟೇಬಲ್ ಟೆನಿಸ್ ಚಾಂಪಿಯನ್ ಶ್ರೀಜಾ ಅಕುಲಾ ಅವರ ವಿನಂತಿಗೂ ಸಚಿವಾಲಯದ ‘ಮಿಷನ್ ಒಲಿಂಪಿಕ್ ಸೆಲ್’ ಒಪ್ಪಿಗೆ ನೀಡಿದೆ. ಅವರು ಲಿಯು ಜುನ್–ಲಿನ್ ಅವರಿಂದ 12 ದಿನಗಳ ತರಬೇತಿ ಪಡೆಯಲಿದ್ದಾರೆ.
ಟರ್ಕಿಯ ಅಂಟಾಲ್ಯದಲ್ಲಿ ನಡೆಯಲಿರುವ ಗ್ರ್ಯಾಂಡ್‌ಸ್ಲಾಮ್ ಸ್ಪರ್ಧೆಯಲ್ಲಿ ಭಾಗವಹಿಸಲು ಆರ್ಥಿಕ ನೆರವು ನೀಡುವಂತೆ ತುಲಿಕಾ ಮಾನ್ ಅವರ ಕೋರಿಕೆಯನ್ನೂ ಮನ್ನಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.