ADVERTISEMENT

ಮುಂದಿನ ವರ್ಷ ಭಾರತದಲ್ಲಿ ಮೋಟೊಜಿಪಿ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2022, 14:26 IST
Last Updated 30 ಸೆಪ್ಟೆಂಬರ್ 2022, 14:26 IST
   

ನವದೆಹಲಿ: ವಿಶ್ವದ ಪ್ರತಿಷ್ಠಿತ ದ್ವಿಚಕ್ರ ವಾಹನ ರೇಸ್‌ ಎನಿಸಿರುವ ಮೋಟೊಜಿಪಿಯ (ಗ್ರ್ಯಾನ್‌ಪ್ರಿ ಮೋಟರ್‌ಸೈಕಲ್‌ ರೇಸಿಂಗ್‌) ಮುಂದಿನ ಋತುವಿನ ಒಂದು ರೇಸ್‌ ಭಾರತದಲ್ಲಿ ನಡೆಯಲಿದ್ದು, ಈ ರೇಸ್‌ಗೆ ಆತಿಥ್ಯ ವಹಿಸುವ 31ನೇ ರಾಷ್ಟ್ರ ಎನಿಸಿಕೊಳ್ಳಲಿದೆ.

ಉತ್ತರ ಪ್ರದೇಶದ ಗ್ರೇಟರ್‌ ನೊಯಿಡಾದಲ್ಲಿರುವ ಬುದ್ಧ ಇಂಟರ್‌ನ್ಯಾಷನಲ್‌ ಸರ್ಕಿಟ್‌ನಲ್ಲಿ 2023ರ ಸೆಪ್ಟೆಂಬರ್‌ 22ರಿಂದ 24ರ ವರೆಗೆ ರೇಸ್‌ ನಡೆಯಲಿದೆ ಎಂದು ಮೋಟೊಜಿಪಿಯ ವಾಣಿಜ್ಯ ಹಕ್ಕುಗಳನ್ನು ಹೊಂದಿರುವ ‘ಡೋರ್ನ ಸ್ಪೋರ್ಟ್ಸ್‌’ ಪ್ರಕಟಣೆಯಲ್ಲಿ ತಿಳಿಸಿದೆ. 2023ರ ಋತುವಿನ 14ನೇ ರೇಸ್‌ ಇದಾಗಿರಲಿದೆ.

‘ನಮ್ಮ 2023ರ ಕ್ಯಾಲೆಂಡರ್‌ನ ಒಂದು ರೇಸ್‌ ಬುದ್ಧ ಇಂಟರ್‌ನ್ಯಾಷನಲ್‌ ಸರ್ಕಿಟ್‌ನಲ್ಲಿ ನಡೆಯಲಿದೆ ಎಂಬುದನ್ನು ಪ್ರಕಟಿಸಲು ಹೆಮ್ಮೆಯೆನಿಸುತ್ತದೆ. ಮೋಟೊಜಿಪಿಗೆ ಭಾರತದಲ್ಲಿ ಸಾಕಷ್ಟು ಅಭಿಮಾನಿಗಳು ಇದ್ದಾರೆ. ಈ ರೇಸ್‌ಅನ್ನು ಭಾರತದಲ್ಲಿ ಇದೇ ಮೊದಲ ಬಾರಿ ಆಯೋಜಿಸಲು ಸಾಧ್ಯವಾಗುತ್ತಿರುವುದು ಸಂತಸದ ವಿಷಯ’ ಎಂದು ಡೋರ್ನ ಸಿಇಒ ಕಾರ್ಮೆಲೊ ಎಜ್‌ಪಿಲೇಟಾ ಹೇಳಿದ್ದಾರೆ.

ADVERTISEMENT

ಡೋರ್ನ ಸ್ಪೋರ್ಟ್ಸ್‌ ಅಧಿಕಾರಿಗಳು ಇತ್ತೀಚೆಗೆ ಭಾರತಕ್ಕೆ ಭೇಟಿ ನೀಡಿದ್ದರಲ್ಲದೆ, ದೇಶದ ಮುಂಚೂಣಿಯ ರೇಸ್‌ ಪ್ರಾಯೋಜಕರಾದ ಫೇರ್‌ಸ್ಟ್ರೀಟ್‌ ಸ್ಪೋರ್ಟ್ಸ್‌ (ಎಫ್‌ಎಸ್‌ಎಸ್‌) ಜತೆ ಏಳು ವರ್ಷಗಳ ಅವಧಿಗೆ ಒಪ್ಪಂದ ಮಾಡಿಕೊಂಡಿದ್ದರು. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಕೇಂದ್ರ ಕ್ರೀಡಾ ಸಚಿವ ಅನುರಾಗ್‌ ಠಾಕೂರ್‌ ಜತೆಯೂ ಮಾತುಕತೆ ನಡೆಸಿದ್ದರು.

2011 ರಿಂದ 2013ರ ವರೆಗೆ ಬುದ್ಧ ಇಂಟರ್‌ನ್ಯಾಷನಲ್‌ ಸರ್ಕಿಟ್‌ನಲ್ಲಿ ಫಾರ್ಮುಲಾ ಒನ್‌ ರೇಸ್‌ ನಡೆದಿತ್ತು. ಆ ಬಳಿಕ ವಿವಿಧ ಕಾರಣಗಳಿಂದಾಗಿ ಈ ರೇಸ್‌ ಭಾರತದಲ್ಲಿ ನಡೆದಿಲ್ಲ. ಇದೀಗ ಮೋಟೊಜಿಪಿ ಮೂಲಕ ವಿಶ್ವದ ಮತ್ತೊಂದು ಪ್ರತಿಷ್ಠಿತ ರೇಸ್ ಭಾರತಕ್ಕೆ ಕಾಲಿಡಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.