ಗ್ರೇಟರ್ ನೋಯ್ಡಾ: ಆರಂಭದಿಂದಲೇ ಮುನ್ನಡೆ ಕಾಯ್ದುಕೊಂಡ ಸ್ಪೇನ್‌ನ ಜಾರ್ಜ್ ಮಾರ್ಟಿನ್ ಅವರು ಮೋಟೊಜಿಪಿ ಬೈಕ್‌ರೇಸ್‌ನ ಸ್ಪ್ರಿಂಟ್ ವಿಭಾಗದಲ್ಲಿ ಅಗ್ರಸ್ಥಾನ ಪಡೆದರು.
ಬುದ್ಧ ಇಂಟರ್‌ನ್ಯಾಷನಲ್ ಸರ್ಕಿಟ್‌ನಲ್ಲಿ ಶನಿವಾರ ನಡೆದ ರೇಸ್‌ನಲ್ಲಿ ಡುಕಾಟಿ–ಪ್ರಮ್ಯಾಕ್ ತಂಡವನ್ನು ಪ್ರತಿನಿಧಿಸಿದ ಮಾರ್ಟಿನ್ ಅವರು ಗ್ರಿಡ್‌ನಲ್ಲಿ ಎರಡನೆಯವರಾಗಿ ಸ್ಪರ್ಧೆ ಆರಂಭಿಸಿದ್ದರು.
ರೇಸ್ ಆರಂಭವಾದ ಮೊದಲ ತಿರುವಿನಲ್ಲಿ ಕೆಲವು ರೈಡರ್‌ಗಳು ಬೈಕ್‌ನ ಮೇಲೆ ನಿಯಂತ್ರಣ ಕಳೆದುಕೊಂಡು ಬಿದ್ದರು. ಈ ವೇಳೆ ಮುನ್ನಡೆ ಗಳಿಸಿದ ಮಾರ್ಟಿನ್ ಅದನ್ನು ಕೊನೆಯವರೆಗೂ ಕಾಪಾಡಿಕೊಳ್ಳುವಲ್ಲಿ ಯಶಸ್ವಿಯಾದರು.
ವಿಶ್ವ ಚಾಂಪಿಯನ್ ಅಗಿರುವ ಇಟಲಿಯ ರೈಡರ್ ಫ್ರಾನ್ಸೆಸ್ಕೊ ಬನ್ಯಾಯಾ ಅವರು ಎರಡನೇ ಸ್ಥಾನ ತಮ್ಮದಾಗಿಸಿಕೊಂಡರೆ, ಮಾರ್ಕ್ ಮಾರ್ಕ್ವೆಜ್ ಮೂರನೇ ಸ್ಥಾನ ಗಳಿಸಿದರು. ಪೋಲ್ ಪೊಸಿಷನ್‌ನಲ್ಲಿ ಸ್ಪರ್ಧೆ ಆರಂಭಿಸಿದ್ದ ಮಾರ್ಕೊ ಬೆಜೆಚಿ ಅವರು ಮೊದಲ ತಿರುವಿನಲ್ಲಿ ಬೈಕ್ ಮೇಲಿನ ನಿಯಂತ್ರಣ ಕಳೆದುಕೊಂಡರು. ಇದರಿಂದ ಹಿಂದೆ ಬಿದ್ದ ಅವರಿಗೆ ಆ ಬಳಿಕ ಮುನ್ನಡೆ ಸಾಧಿಸಲು ಆಗಲಿಲ್ಲ. ಅವರು ಐದನೆಯವರಾಗಿ ಸ್ಪರ್ಧೆ ಕೊನೆಗೊಳಿಸಿದರು.
ಮಾರ್ಟಿನ್ ಅವರು ಈ ಹಿಂದೆ ಮಿಸಾನೊದಲ್ಲಿ ನಡೆದಿದ್ದ ರೇಸ್‌ನಲ್ಲಿ ಗೆದ್ದಿದ್ದರು. ‘ಎಲ್ಲವೂ ನನ್ನ ಲೆಕ್ಕಾಚಾರದಂತೆ ನಡೆಯಿತು. ಉತ್ತಮ ಆರಂಭ ಪಡೆಯುವಲ್ಲಿ ಯಶಸ್ವಿಯಾದೆ. ಮೊದಲ ಲ್ಯಾಪ್‌ನಲ್ಲೇ ಇತರ ಸ್ಪರ್ಧಿಗಳನ್ನು ಅರ್ಧ ಸೆಕೆಂಡ್ ಅಂತರದಿಂದ ಹಿಂದೆ ತಳ್ಳಿದೆ. ಮುನ್ನಡೆಯನ್ನು ಕೊನೆಯವರೆಗೂ ಕಾಪಾಡಿಕೊಂಡೆ’ ಎಂದು ಮಾರ್ಟಿನ್ ಪ್ರತಿಕ್ರಿಯಿಸಿದರು.
ಭಾರತದಲ್ಲಿ ಇದೇ ಮೊದಲ ಬಾರಿ ಆಯೋಜನೆಯಾಗಿರುವ ಮೋಟೊಜಿಪಿಯ ಗ್ರ್ಯಾನ್‌ಪ್ರಿ ರೇಸ್ ಭಾನುವಾರ ನಡೆಯಲಿದೆ. ಸ್ಪ್ರಿಂಟ್ ರೇಸ್ ವೇಳೆ ಬಿದ್ದು ಗಾಯಗೊಂಡ ಅಲೆಕ್ಸ್ ಮಾರ್ಕ್ವೆಜ್ ಅವರು ಭಾನುವಾರದ ರೇಸ್‌ನಿಂದ ಹೊರಬಿದ್ದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.