ಆಸ್ಟಿನ್ : ಅದ್ಭುತಾ ಚಾಲನಾ ಕೌಶಲ ಮೆರೆದ ರೆಡ್‌ಬುಲ್ ತಂಡದ ಮ್ಯಾಕ್ಸ್ ವರ್ಸ್ಟ್ಯಾಪನ್ ಅವರು ಭಾನುವಾರ ನಡೆದ ಅಮೆರಿಕ ಗ್ರ್ಯಾನ್ ಪ್ರಿ ರೇಸ್ ಗೆದ್ದುಕೊಂಡರು. ಈ ಮೂಲಕ ತಮ್ಮ ತಂಡಕ್ಕೆ ಈ ಋತುವಿನ ‘ಫಾರ್ಮುಲಾ ಒನ್ ಕನ್‌ಸ್ಟ್ರಕ್ಟರ್ಸ್’ (ತಂಡ ವಿಭಾಗ) ಕಿರೀಟ ತಂದುಕೊಟ್ಟರು.
ರೆಡ್‌ಬುಲ್ ತಂಡ ಇದರೊಂದಿಗೆ ಮರ್ಸಿಡಿಸ್ ತಂಡದ ಪ್ರಾಬಲ್ಯವನ್ನು ಕೊನೆಗೊಳಿಸಿತು. ಮರ್ಸಿಡಿಸ್ ಸತತ ಎಂಟು ವರ್ಷಗಳಿಂದ ತಂಡ ವಿಭಾಗದ ಪ್ರಶಸ್ತಿ ಗೆಲ್ಲುತ್ತಾ ಬಂದಿತ್ತು. ರೆಡ್‌ಬುಲ್ 2013ರಲ್ಲಿ ಕೊನೆಯದಾಗಿ ಪ್ರಶಸ್ತಿ ಜಯಿಸಿತ್ತು.
ವರ್ಸ್ಟ್ಯಾಪನ್ ಅವರ ಪ್ರಯತ್ನದಿಂದ ರೆಡ್‌ಬುಲ್ ತಂಡದ ಪಾಯಿಂಟ್‌ಗಳ ಸಂಖ್ಯೆ 656ಕ್ಕೆ ಹೆಚ್ಚಿತು. ಎರಡನೇ ಸ್ಥಾನದಲ್ಲಿರುವ ಫೆರಾರಿ ತಂಡದ ಬಳಿ 469 ಪಾಯಿಂಟ್ಸ್‌ಗಳಿವೆ. ಋತುವಿನಲ್ಲಿ ಇನ್ನು ಮೂರು ರೇಸ್‌ಗಳು ಇದ್ದು, ಫೆರಾರಿ ಚಾಲಕರು ಅವುಗಳನ್ನು ಗೆದ್ದರೂ ರೆಡ್‌ಬುಲ್ ತಂಡವನ್ನು ಹಿಂದಿಕ್ಕಲು ಆಗದು.
ದಾಖಲೆ ಸರಿಗಟ್ಟಿದ ವರ್ಸ್ಟ್ಯಾಪನ್: ಎರಡು ವಾರಗಳ ಹಿಂದೆ ನಡೆದ ಜಪಾನ್ ಗ್ರ್ಯಾನ್‌ಪ್ರಿನಲ್ಲಿ ಗೆದ್ದು ಈ ಋತುವಿನ ಫಾರ್ಮುಲಾ ಒನ್ ವಿಶ್ವಚಾಂಪಿಯನ್ ಆಗಿದ್ದ, ವರ್ಸ್ಟ್ಯಾಪನ್ ಜಯದ ಓಟ ಮುಂದುವರಿಸಿದರು.
ಅವರಿಗೆ ಈ ಋತುವಿನಲ್ಲಿ ಲಭಿಸಿದ 13ನೇ ಗೆಲುವು ಇದು. ಫಾರ್ಮುಲಾ ಒನ್ ಋತುವಿನಲ್ಲಿ ಅತ್ಯಧಿಕ ಗೆಲುವು ಪಡೆದಿರುವ ಮೈಕಲ್ ಶುಮಾಕರ್ ಮತ್ತು ಸೆಬಾಸ್ಟಿಯನ್ ವೆಟೆಲ್ ಅವರ ಹೆಸರಲ್ಲಿರುವ ದಾಖಲೆ ಸರಿಗಟ್ಟಿದರು. ಋತುವಿನಲ್ಲಿ ಇನ್ನೂ ಮೂರು ರೇಸ್‌ಗಳು ಇರುವುದರಿಂದ ವರ್ಸ್ಟ್ಯಾಪನ್ ಅವರಿಗೆ ಹೊಸ ದಾಖಲೆ ಬರೆಯುವ ಅವಕಾಶವಿದೆ.
ಮರ್ಸಿಡಿಸ್ ತಂಡದ ಲೂಯಿಸ್ ಹ್ಯಾಮಿಲ್ಟನ್ ಎರಡನೇ ಸ್ಥಾನ ಪಡೆದರೆ, ಫೆರಾರಿ ತಂಡದ ಚಾರ್ಲ್ಸ್ ಲೆಕ್ಲೆರ್ಕ್ ಮೂರನೇ ಸ್ಥಾನ ಗಳಿಸಿದರು. ಪೋಲ್ ಪೊಸಿಷನ್‌ನಿಂದ ಸ್ಪರ್ಧೆ ಆರಂಭಿಸಿದ್ದ ಫೆರಾರಿ ತಂಡದ ಕಾರ್ಲೊಸ್ ಸೇಂಜ್ ಮೊದಲ ಲ್ಯಾಪ್‌ನಲ್ಲೇ ರೇಸ್‌ನಿಂದ ಹಿಂದೆ ಸರಿದರು. ಅವರ ಕಾರು ಮರ್ಸಿಡಿಸ್ ತಂಡದ ಜಾರ್ಜ್ ರಸೆಲ್ ಕಾರಿಗೆ ಡಿಕ್ಕಿಯಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.