ಯೂಜೀನ್, ಅಮೆರಿಕ: ಭಾರತದ ಮುರಳಿ ಶ್ರೀಶಂಕರ್ ಅವರು ವಿಶ್ವ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನಲ್ಲಿ ಪದಕದೆಡೆಗೆ ಜಿಗಿಯುವಲ್ಲಿ ವಿಫಲರಾದರು. ಪುರುಷರ ಲಾಂಗ್‌ಜಂಪ್ ಸ್ಪರ್ಧೆಯಲ್ಲಿ ಏಳನೇ ಸ್ಥಾನ ಪಡೆದುಕೊಂಡರು.
ವಿಶ್ವ ಅಥ್ಲೆಟಿಕ್ಸ್‌ನ ಪುರುಷರ ಲಾಂಗ್‌ಜಂಪ್‌ನಲ್ಲಿ ಫೈನಲ್ ಪ್ರವೇಶಿಸಿದ ಭಾರತದ ಮೊದಲ ಅಥ್ಲೀಟ್ ಎಂಬ ಗೌರವ ತಮ್ಮದಾಗಿಸಿಕೊಂಡಿದ್ದ ಮುರಳಿ, ಫೈನಲ್‌ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ.
23 ವರ್ಷದ ಮುರಳಿ 7.96 ಮೀ. ದೂರ ಜಿಗಿದರು. ಕಣದಲ್ಲಿದ್ದ 12 ಸ್ಪರ್ಧಿಗಳಲ್ಲಿ ಅವರು ಏಳನೆಯವರಾದರು. ಮೊದಲ ಅವಕಾಶದಲ್ಲಿ ಈ ದೂರ ಕಂಡುಕೊಂಡರು. ನಾಲ್ಕನೇ ಅವಕಾಶದಲ್ಲಿ 7.89 ಮೀ. ಮತ್ತು ಕೊನೆಯ ಅವಕಾಶದಲ್ಲಿ 7.83 ಮೀ. ದೂರ ಜಿಗಿದರು. 2, 3 ಮತ್ತು 5ನೇ ಪ್ರಯತ್ನಗಳು ಫೌಲ್ ಆದವು.
ಚೀನಾದ ಜಿಯನನ್ ವಾಂಗ್ 8.36 ಮೀ. ಸಾಧನೆಯೊಂದಿಗೆ ಚಿನ್ನ ಗೆದ್ದರು. ಒಲಿಂಪಿಕ್ ಚಾಂಪಿಯನ್ ಗ್ರೀಸ್‌ನ ಮಿಲ್ಟಿಯಾಡಿಸ್ ಟೆಂಟೊಗ್ಲೌ (8.30 ಮೀ.) ಬೆಳ್ಳಿ ಹಾಗೂ ಸ್ವಿಟ್ಜರ್‌ಲೆಂಡ್‌ನ ಸಿಮೊನ್ ಹಮೆರ್ (8.16 ಮೀ.) ಕಂಚು ಜಯಿಸಿದರು.
ಪಾರುಲ್ ಚೌಧರಿಗೆ 31ನೇ ಸ್ಥಾನ: ಭಾರತದ ಪಾರುಲ್ ಚೌಧರಿ, ಮಹಿಳೆಯರ 3,000 ಮೀ. ಸ್ಟೀಪಲ್ ಚೇಸ್ ಸ್ಪರ್ಧೆಯಲ್ಲಿ ವೈಯಕ್ತಿಕ ಶ್ರೇಷ್ಠ ಸಮಯ ಕಂಡುಕೊಂಡರೂ ಫೈನಲ್ ಪ್ರವೇಶಿಸಲು ವಿಫಲರಾದರು.
ಎರಡನೇ ಹೀಟ್‌ನಲ್ಲಿ ಸ್ಪರ್ಧಿಸಿದ ಅವರು 9 ನಿ. 38.09 ಸೆಕೆಂಡುಗಳಲ್ಲಿ 12ನೆಯವರಾಗಿ ಗುರಿ ತಲುಪಿದರು. ಒಟ್ಟಾರೆಯಾಗಿ ಅವರಿಗೆ 31ನೇ ಸ್ಥಾನ ಲಭಿಸಿತು.
ಪುರುಷರ 400 ಮೀ. ಹರ್ಡಲ್ಸ್‌ನಲ್ಲಿ ಸ್ಪರ್ಧಿಸಿದ ಭಾರತದ ಎಂ.ಪಿ.ಜಾಬಿರ್ ಸೆಮಿಫೈನಲ್ ಪ್ರವೇಶಿಸಲು ವಿಫಲರಾದರು. ಏಳು ಅಥ್ಲೀಟ್‌ಗಳು ಪಾಲ್ಗೊಂಡ ಎರಡನೇ ಹೀಟ್ಸ್‌ನಲ್ಲಿ ಅವರು ಕೊನೆಯವರಾದರು.
100 ಮೀ ಓಟ: ಅಮೆರಿಕ ‘ಕ್ಲೀನ್‌ಸ್ವೀಪ್’
ಪುರುಷರ 100 ಮೀ. ಓಟದ ಸ್ಪರ್ಧೆಯಲ್ಲಿ ಅಮೆರಿಕ ‘ಕ್ಲೀನ್‌ಸ್ವೀಪ್’ ಸಾಧನೆ ಮಾಡಿತು. ಫ್ರೆಡ್ ಕೆರ್ಲಿ 9.86 ಸೆ.ಗಳೊಂದಿಗೆ ಗುರಿ ತಲುಪಿ ಚಿನ್ನ ಗೆದ್ದರೆ, ಮರ್ವಿನ್ ಬ್ರೇಸಿ (9.88 ಸೆ.) ಬೆಳ್ಳಿ ಪದಕ ಪಡೆದರು. ಟ್ರೇವನ್ ಬ್ರೊಮೆಲ್ (9.88 ಸೆ.) ಮೂರನೆಯವರಾದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.