ನವದೆಹಲಿ: ಒಲಿಂಪಿಕ್ ಪದಕ ವಿಜೇತ ಕುಸ್ತಿಪಟು ಬಜರಂಗ್ ಪೂನಿಯಾ ಅವರನ್ನು ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಘಟಕ (ಎನ್‌ಎಡಿಎ – ನಾಡಾ) ಮತ್ತೊಮ್ಮೆ ಅಮಾನತು ಮಾಡಿದೆ.
ಇದೇ ವರ್ಷ ಮಾರ್ಚ್ 10ರಂದು ಸೋನೆಪತ್‌ನಲ್ಲಿ ನಡೆದ ಆಯ್ಕೆ ಟ್ರಯಲ್ಸ್ ವೇಳೆ ಉದ್ದೀಪನ ಮದ್ದು ಪರೀಕ್ಷೆಗೆ ಮೂತ್ರದ ಮಾದರಿ ನೀಡಲು ನಿರಾಕರಿಸಿದ್ದ ಆರೋಪದಲ್ಲಿ ಬಜರಂಗ್ ಅವರನ್ನು ಏಪ್ರಿಲ್ 23ರಂದು ನಾಡಾ ಅಮಾನತು ಮಾಡಿತ್ತು. ಅದರಂತೆ ವಿಶ್ವ ಕುಸ್ತಿ ಒಕ್ಕೂಟವೂ (ಯುಡಬ್ಲ್ಯುಡಬ್ಲ್ಯು) ಬಜರಂಗ್ ಅವರನ್ನು ಅಮಾನತು ಮಾಡಿತ್ತು.
ತನ್ನ ಕ್ರಮಕ್ಕೆ ಸಂಬಂಧಿಸಿದಂತೆ ನಾಡಾ ನೋಟಿಸ್ ನೀಡದ ಹಿನ್ನೆಲೆಯಲ್ಲಿ ಉದ್ದೀಪನ ಮದ್ದು ತಡೆ ಶಿಸ್ತು ಸಮಿತಿಯು (ಎಡಿಡಿಪಿ) ಮೂರು ವಾರಗಳ ಬಳಿಕ (ಮೇ 31ರಂದು) ಅಮಾನತು ಆದೇಶ ರದ್ದುಮಾಡಿತ್ತು.
ಇದೀಗ ಮತ್ತೊಮ್ಮೆ ಬಜರಂಗ್ ಅವರನ್ನು ಅಮಾನತು ಮಾಡಿರುವ ನಾಡಾ, ಈ ಬಾರಿ ಕ್ರಮದ ನೋಟಿಸ್ ಅನ್ನೂ ನೀಡಿದೆ.
'ರಾಷ್ಟ್ರೀಯ ಉದ್ದೀಪನ ಮದ್ದು ತಡೆ ನಿಯಮ–2021ರ ವಿಧಿ 2.3 ಅನ್ನು ಉಲ್ಲಂಘಿಸಿದ್ದಕ್ಕೆ ಸಂಬಂಧಿಸಿದಂತೆ ಈ ನೋಟಿಸ್ ನೀಡಲಾಗಿದೆ. ನಿಮ್ಮನ್ನು ತಾತ್ಕಾಲಿಕವಾಗಿ ಅಮಾನತು ಮಾಡಲಾಗಿದೆ' ಎಂದು ಬಜರಂಗ್‌ಗೆ ತಿಳಿಸಿದೆ.
ಅಮಾನತನ್ನು ಪ್ರಶ್ನಿಸಲು ಅಥವಾ ಒಪ್ಪಿಕೊಳ್ಳಲು ಜುಲೈ 11ರ ವರೆಗೆ ಬಜರಂಗ್ ಅವರಿಗೆ ಅವಕಾಶ ನೀಡಲಾಗಿದೆ.
ಕ್ರಮವನ್ನು ಪ್ರಶ್ನಿಸುವುದಾಗಿ ಬಜರಂಗ್ ಪರ ವಕೀಲ ವಿದೂಷ್‌ಪತ್ ಸಿಂಘಾನಿಯಾ ಹೇಳಿದ್ದಾರೆ.
ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ದೌರ್ಜನ್ಯ ನೀಡಿದ ಆರೋಪ ಎದುರಿಸುತ್ತಿರುವ ಭಾರತ ಕುಸ್ತಿ ಫೆಡರೇಷನ್‌ನ ಹಿಂದಿನ ಅಧ್ಯಕ್ಷ ಬ್ರಿಜ್‌ಭೂಷಣ್ ಸಿಂಗ್ ವಿರುದ್ಧದ ಹೋರಾಟದಲ್ಲಿ ಬಜರಂಗ್ ಮುಂಚೂಣಿಯಲ್ಲಿ ಗುರುತಿಸಿಕೊಂಡಿದ್ದರು.
ಮಾದರಿ ನೀಡಲು ಬಜರಂಗ್ ನಿರಾಕರಿಸಿದ್ದೇಕೆ?
'ಸೋನಿಪತ್‌ನಲ್ಲಿ ನಡೆದ ಆಯ್ಕೆ ಟ್ರಯಲ್ಸ್ ವೇಳೆ ಉದ್ದೀಪನ ಮದ್ದು ನಿಯಂತ್ರಣ ಘಟಕದ ಅಧಿಕಾರಿಗಳು, ಮಾದರಿ ಪಡೆಯಲು ತಂದಿದ್ದ ಪರೀಕ್ಷಾ ಕಿಟ್‌ಗಳು ಸಮರ್ಪಕವಾಗಿವೆ ಎಂಬ ಬಗ್ಗೆ ಅಗತ್ಯ ಸಾಕ್ಷ್ಯ ನೀಡಲು ವಿಫಲವಾಗಿದ್ದರು. ಹಾಗಾಗಿ ಮೂತ್ರದ ಮಾದರಿ ನೀಡಲು ನಾನು ನಿರಾಕರಿಸಿದ್ದೆ' ಎಂದು ಮೊದಲ ಸಲ ಅಮಾನತಾದಾಗ ಬಜರಂಗ್ ಹೇಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.