ಹೈದರಾಬಾದ್: ಉತ್ತಮ ಲಯದಲ್ಲಿರುವ ನರೇಂದರ್ ಕಂಡೋಲ ಅವರ ಅಮೋಘ ರೇಡಿಂಗ್ ಪ್ರದರ್ಶನದಿಂದ ಮತ್ತೊಮ್ಮೆ ಮಿಂಚಿದ ತಮಿಳ್ ತಲೈವಾಸ್ ತಂಡ ಪ್ರೊ ಕಬಡ್ಡಿ ಲೀಗ್‌ನ 25ನೇ ಪಂದ್ಯದಲ್ಲಿ 44– 25 ಅಂಕಗಳಿಂದ ಗುಜರಾತ್ ಜೈಂಟ್ಸ್ ತಂಡವನ್ನು ಸುಲಭವಾಗಿ ಮಣಿಸಿತು.
ಗಚ್ಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಈ ಪಂದ್ಯದಲ್ಲಿ ತಲೈವಾಸ್ ತಂಡ ಒಮ್ಮೆಯೂ ಗುಜರಾತ್ ತಂಡಕ್ಕೆ ಮುನ್ನಡೆ ಬಿಟ್ಟುಕೊಡಲಿಲ್ಲ. ಇದು ಹಾಲಿ ಆವೃತ್ತಿಯಲ್ಲಿ ತಲೈವಾಸ್ ತಂಡಕ್ಕೆ ಮೂರನೇ ಜಯ.
ಕಳೆದ ಪಂದ್ಯದಲ್ಲಿ ಜೈಪುರ ಪಿಂಕ್‌ಪ್ಯಾಂಥರ್ಸ್ ವಿರುದ್ಧ ಡ್ರಾ ಸಾಧಿಸಿ ಮೂರು ಅಂಕ ಗಿಟ್ಟಿಸಿದ್ದ ತಲೈವಾಸ್, ಜೈಂಟ್ಸ್ ವಿರುದ್ಧ ಪೂರ್ಣ 6 ಅಂಕ ಕಲೆಹಾಕಿತು. ಇನ್ನೊಂದೆಡೆ ಜೈಂಟ್ಸ್ ಸತತ ಎರಡನೇ ಸೋಲಿಗೆ ಗುರಿಯಾಯಿತು.
ತಲೈವಾಸ್ ಪರ ನರೇಂದರ್ 15 ಅಂಕ ಗಳಿಸಿದರೆ, ಸಚಿನ್ ಮತ್ತು ಸಾಹಿಲ್ ತಲಾ 5 ಅಂಕಗಳ ಕೊಡುಗೆ ನೀಡಿದರು. ಸೋತ ತಂಡದ ಪರ ಗುಮಾನ್ ಗರಿಷ್ಠ 7 ಅಂಕ ಗಳಿಸಿದರು.
ಪಂದ್ಯ ಮುಗಿಯಲು 10 ನಿಮಿಷಗಳಿರುವಾಗ ಗುಜರಾತ್ ಜೈಂಟ್ಸ್ ಪುಟಿದೇಳಬಹುದು ಎಂಬ ನಿರೀಕ್ಷೆ ಮೂಡಿಸಿತು. ಜೈಂಟ್ಸ್ ಸತತವಾಗಿ 5 ಅಂಕ ಗಳಿಸಿ ಹಿನ್ನಡೆಯನ್ನು 23-31ಕ್ಕೆ ಇಳಿಸಿ ಪ್ರತಿಹೋರಾಟದ ಸೂಚನೆ ನೀಡಿತು. ಆದರೆ ಸೂಪರ್ ಟ್ಯಾಕಲ್‌ನಲ್ಲಿ ಯಶಸ್ವಿಯಾದ ತಲೈವಾಸ್, ಅಂಗಣದಲ್ಲಿ ನಾಲ್ಕಕಿಂತ ಕಡಿಮೆ ಆಟಗಾರರು ಇಲ್ಲದಂತೆ ಎಚ್ಚರವಹಿಸಿತು.
ಮೊದಲಾರ್ಧದಲ್ಲಿ ತಲೈವಾಸ್ 18–14 ಅಂಕಗಳಿಂದ ಮುನ್ನಡೆಯಲ್ಲಿತ್ತು. ಆತ್ಮವಿಶ್ವಾಸದಲ್ಲಿ ಆಟ ಮುಂದುವರಿಸಿದ ತಲೈವಾಸ್ ಆಟಗಾರರು, ನಿಯಮಿತವಾಗಿ ಅಂಕ ಪಡೆಯುವ ಮೂಲಕ ಜೈಂಟ್ಸ್ ಮೇಲೆ ಒತ್ತಡ ಹೇರುವಲ್ಲಿ ಯಶಸ್ವಿಯಾದರು. ಈ ಹಂತದಲ್ಲಿ ಸಮನ್ವಯತೆಯ ಕೊರತೆ ಎದುರಿಸಿದ
ನೀರಜ್ ಕುಮಾರ್ ಬಳಗ 25ನೇ ನಿಮಿಷ ಆಲೌಟ್ ಬಲೆಗೆ ಬಿದ್ದಿತು. ಇದರಿಂದ ತನ್ನ ಮುನ್ನಡೆಯನ್ನು 27-15ಕ್ಕೆ ಹೆಚ್ಚಿಸಿಕೊಂಡ ತಲೈವಾಸ್ ತಂಡ ಪಂದ್ಯದ ಮೇಲಿನ ಹಿಡಿತವನ್ನು ಬಿಗಿಗೊಳಿಸಿತು.
ಗುಜರಾತ್ ತಂಡದ ಹಿನ್ನಡೆ ತಗ್ಗಿಸಲು ವಾಹಿದ್, ಸೋಂಬೀರ್, ರೋಹಿತ್, ಪರ್ತೀಕ್ ಯತ್ನಿಸಿದರೂ ಎದುರಾಳಿ ತಂಡ 30 ನಿಮಿಷಗಳ ಬಳಿಕ ಮುನ್ನಡೆಯನ್ನು 12 (31-19) ಅಂಕಗಳಿಗೆ ಹೆಚ್ಚಿಸಿಕೊಂಡಿತು. ನರೇಂದರ್ ಅವರಿಗೆ ಸಚಿನ್, ನಿತೇಶ್, ಆಮಿರ್ ಮತ್ತು ಸಾಹಿಲ್ ಬೆಂಬಲ ನೀಡಿದರು.
ಗುರುವಾರದ ಪಂದ್ಯಗಳು: ಪಟ್ನಾ ಪೈರೇಟ್ಸ್ –ದಬಾಂಗ್ ಡೆಲ್ಲಿ (8.00); ಯು ಮುಂಬಾ– ಜೈಪುರ ಪಿಂಕ್ ಪ್ಯಾಂಥರ್ಸ್ (ರಾತ್ರಿ 9.00)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.