ಬೆಂಗಳೂರು: ಗುವಾಹಟಿಯಲ್ಲಿ ಇದೇ ತಿಂಗಳ 26ರಿಂದ ನಡೆಯಲಿರುವ ರಾಷ್ಟ್ರೀಯ ಅಥ್ಲೆಟಿಕ್ಸ್ ಕೂಟದಲ್ಲಿ ಪಾಲ್ಗೊಳ್ಳುವ ರಾಜ್ಯದ ಅಥ್ಲೀಟ್‌ಗಳ ಹೆಸರು ನಾಪತ್ತೆಯಾಗಿದೆಯೇ?
ಟ್ರಿಪಲ್ ಜಂಪ್ ಅಥ್ಲೀಟ್, ದಕ್ಷಿಣ ಕನ್ನಡದ ಜಾಯೆಲಿನ್ ಲೋಬೊ ಮತ್ತು ಸ್ಪ್ರಿಂಟರ್, ಬೆಂಗಳೂರಿನ ಸ್ನೇಹಾ ಪಿ.ಜೆ ಅವರು ಆಯ್ಕೆ ಪ್ರಕ್ರಿಯೆಯಲ್ಲಿ ‘ಉತ್ತೀರ್ಣ’ರಾಗಿದ್ದರೂ ಕೂಟದಲ್ಲಿ ಪಾಲ್ಗೊಳ್ಳಲು ಅರ್ಹತೆ ಪಡೆಯಲಿಲ್ಲ ಎಂಬ ದೂರು ಕೇಳಿ ಬಂದಿದೆ.
ಹೆಸರನ್ನು ರಾಜ್ಯ ಅಥ್ಲೆಟಿಕ್ ಸಂಸ್ಥೆ (ಕೆಎಎ) ಉದ್ದೇಶಪೂರ್ವಕವಾಗಿ ಕೈಬಿಟ್ಟಿರುವುದಾಗಿ ಸ್ನೇಹಾ ಅವರ ಕೋಚ್ ಯತೀಶ್ ಕುಮಾರ್ ಮತ್ತು ಜಾಯೆಲಿನ್ ಲೋಬೊ ಆರೋಪಿಸಿದ್ದಾರೆ. ಆದರೆ ಸಮರ್ಪಕ ಪಟ್ಟಿಯನ್ನು ಕಳುಹಿಸಿದ್ದರೂ ಭಾರತ ಅಥ್ಲೆಟಿಕ್ ಫೆಡರೇಷನ್ ಪ್ರಕಟಿಸಿರುವ ಪಟ್ಟಿಯಲ್ಲಿ ಹೆಸರು ಕಾಣಿಸದೇ ಇರುವುದು ಅಚ್ಚರಿ ಮೂಡಿಸಿದೆ ಎಂದು ಕೆಎಎ ಗೌರವ ಕಾರ್ಯದರ್ಶಿ ಎ.ರಾಜವೇಲು ಹೇಳಿದ್ದಾರೆ.
ಜಾಯೆಲಿನ್ ಲೋಬೊ ಅವರಿಗೆ ಅವಕಾಶ ಸಿಗದೇ ಇರುವ ವಿಷಯ ಇದೀಗ ಕೇಂದ್ರ ಸರ್ಕಾರದವರೆಗೂ ಹೋಗಿದೆ. ಅವರಿಗೆ ನ್ಯಾಯ ಸಿಗಬೇಕು ಎಂದು ಟ್ವಿಟರ್ ಮೂಲಕ ಅನೇಕರು ಒತ್ತಾಯಿಸಿದ್ದಾರೆ. ಇದಕ್ಕೆ ಸ್ಪಂದನೆ ಲಭಿಸಿದ್ದು ಕೂಟಕ್ಕೆ ತೆರಳುವಂತೆತಿಳಿಸಲಾಗಿದೆ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
’ಆಯ್ಕೆ ಟ್ರಯಲ್ಸ್ ದಿನದಂದು ಜೋರಾಗಿ ಮಳೆ ಸುರಿಯುತ್ತಿತ್ತು. ಆದ್ದರಿಂದ ಅಂಗಣಕ್ಕೆ ಇಳಿಯುವುದು ಬೇಡ, ಪಟ್ಟಿಯಲ್ಲಿ ಹೆಸರು ಹಾಕಿ ಕಳುಹಿಸಲಾಗುವುದು ಎಂದು ಕೆಎಎ ಪದಾಧಿಕಾರಿಗಳು ತಿಳಿಸಿದ್ದರು. ಆದರೆ ಐಒಎ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ನನ್ನ ಹೆಸರೇ ಇಲ್ಲ’ ಎಂದು ಲೋಬೊ ತಿಳಿಸಿದರು.
‘ಆಯ್ಕೆ ಟ್ರಯಲ್ಸ್‌ನಲ್ಲಿ ಮೊದಲ ಸ್ಥಾನ ಮತ್ತು ಮೂರನೇ ಸ್ಥಾನ ಗಳಿಸಿದವರು ಹೆಸರು ಪಟ್ಟಿಯಲ್ಲಿದೆ. ಎರಡನೇಯವರಾಗಿದ್ದ ಸ್ನೇಹಾ ಹೆಸರು ಇಲ್ಲ’ ಎಂದು ಯತೀಶ್ ಕುಮಾರ್ ಹೇಳಿದರು.
ತಕ್ಷಣ ಸ್ಪಂದಿಸಲಾಗಿದೆ:ಐಒಎ ಸಿದ್ಧಪಡಿಸಿದ ಪಟ್ಟಿಯಲ್ಲಿ ರಾಜ್ಯದ ಕ್ರೀಡಾಪಟುಗಳ ಹೆಸರು ಬಿಟ್ಟುಹೋಗಿರುವುದು ಗಮನಕ್ಕೆ ಬಂದ ಕೂಡಲೇ ಇ ಮೇಲ್ ಕಳಿಸಿ ಸರಿಪಡಿಸುವಂತೆ ಕೋರಲಾಗಿದೆ. ಮನವಿಗೆ ಸ್ಪಂದನೆ ಸಿಗುವ ಸಾಧ್ಯತೆ ಇದೆ. ಆದ್ದರಿಂದ ರಾಜ್ಯದ ಅಥ್ಲೀಟ್‌ಗಳಿಗೆ ಅವಕಾಶ ಸಿಗುವುದರಲ್ಲಿ ಸಂದೇಹ ಇಲ್ಲ ಎಂದು ರಾಜವೇಲು ಅಭಿಪ್ರಾಯಪಟ್ಟರು.
*
ಪಟ್ಟಿಯಲ್ಲಿ ಹೆಸರಿಲ್ಲದಿದ್ದರೂ ಕೂಟದಲ್ಲಿ ಪಾಲ್ಗೊಳ್ಳಲು ತೆರಳುವಂತೆ ಕೆಎಎ ಪದಾಧಿಕಾರಿಗಳು ತಿಳಿಸಿದ್ದಾರೆ. ಹೀಗಾಗಿ ಭಾನುವಾರ ಗುವಾಹಟಿಗೆ ತೆರಳುತ್ತೇನೆ.
–ಜಾಯೆಲಿನ್ ಲೋಬೊ, ಟ್ರಿಪಲ್ ಜಂಪ್ ಅಥ್ಲೀಟ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.