ADVERTISEMENT

ಹಾಕಿ: ಪಂಜಾಬ್ ಆ್ಯಂಡ್ ಸಿಂಡ್ ಬ್ಯಾಂಕ್‌ಗೆ ಜಯ

ಪಿಟಿಐ
Published 2 ಫೆಬ್ರುವರಿ 2019, 20:00 IST
Last Updated 2 ಫೆಬ್ರುವರಿ 2019, 20:00 IST

ಗ್ವಾಲಿಯರ್‌: ಪಂಜಾಬ್ ಆ್ಯಂಡ್ ಸಿಂಡ್ ಬ್ಯಾಂಕ್ ತಂಡದವರು ಪುರುಷರ ರಾಷ್ಟ್ರೀಯ ಹಾಕಿ ಚಾಂಪಿಯನ್‌ಷಿಪ್‌ನ ‘ಎ’ ಡಿವಿಷನ್‌ನಲ್ಲಿ ಶನಿವಾರ ಜಯ ಗಳಿಸಿದರು. ಉಳಿದ ಮೂರು ಪಂದ್ಯಗಳು ರೋಚಕ ಡ್ರಾದಲ್ಲಿ ಮುಕ್ತಾಯಗೊಂಡವು.

ಬೆಳಿಗ್ಗೆ ನಡೆದ ‘ಸಿ’ ಗುಂಪಿನ ಪಂದ್ಯದಲ್ಲಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ಎದುರು ಪಂಜಾಬ್ ಆ್ಯಂಡ್‌ ಸಿಂಡ್ ಬ್ಯಾಂಕ್‌ 3–2ರಿಂದ ಗೆದ್ದಿತು. ವಿಜಯಿ ತಂಡಕ್ಕಾಗಿ ಪರ್ವಿಂದರ್ ಸಿಂಗ್ (3ನೇ ನಿಮಿಷ), ಗಗನ್ ಪ್ರೀತ್ ಸಿಂಗ್‌ (8ನೇ ನಿ) ಮತ್ತು ಆಶಿಶ್‌ ಶರ್ಮಾ (21ನೇ ನಿ) ಗೋಲು ಗಳಿಸಿದರು. ಗುರ್ಜಿಂದರ್ ಸಿಂಗ್‌ (35ನೇ ನಿ) ಮತ್ತು ಶಮ್ಶೇರ್‌ ಸಿಂಗ್ (51ನೇ ನಿ) ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಲ್ಲಿ ಜಯ ನಿರೀಕ್ಷೆ ಮೂಡಿಸಿದರು. ಆದರೆ ಕೊನೆಯಲ್ಲಿ ತಂಡ ಸೋಲೊಪ್ಪಿಕೊಂಡಿತು.

‘ಎ’ ಗುಂಪಿನ ಹಾಕಿ ಚಂಡೀಗಢ ಮತ್ತು ಸರ್ವಿಸಸ್ ಸ್ಪೋರ್ಟ್ಸ್ ಕಂಟ್ರೋಲ್‌ ಬೋರ್ಡ್‌ ನಡುವಿನ ಪಂದ್ಯ 3–3ರಲ್ಲಿ ಡ್ರಾಗೊಂಡಿತು. ಮಣಿಂದರ್ ಸಿಂಗ್‌ (32, 59ನೇ ನಿ) ಮತ್ತು ನಾಯಕ ಪ್ರೀತಿಂದರ್ ಸಿಂಗ್‌ (36ನೇ ನಿ) ಚಂಡೀಗಢಕ್ಕೆ ಗೋಲು ತಂದುಕೊಟ್ಟರು. ಸರ್ವಿಸಸ್‌ ಪರ ರಜತ್‌ (45ನೇ ನಿ), ಎ.ಪಿ.ಸಿರಾಜ್‌ (58ನೇ ನಿ) ಮತ್ತು ಸೈಯದ್‌ ರಹೀಮ್‌ (60ನೇ ನಿ) ಚೆಂಡನ್ನು ಗುರಿ ಮುಟ್ಟಿಸಿದರು.

ADVERTISEMENT

‘ಬಿ’ ಗುಂಪಿನ ಪಂದ್ಯದಲ್ಲಿ ಕಂಪ್ಟ್ರೋಲರ್ ಆ್ಯಂಡ್ ಆಡಿಟರ್ ಜನರಲ್‌ (ಸಿಎಜಿ) ಆಫ್ ಇಂಡಿಯಾ ಹಾಗೂ ಕೇಂದ್ರ ಮೀಸಲು ಪೊಲೀಸ್ ಪಡೆ ನಡುವಿನ ಪಂದ್ಯ 2–2ರಲ್ಲಿ ಮುಕ್ತಾಯಗೊಂಡಿತು. ಸಿಎಜಿ ಪರ ಬುಂದೇಲ್‌ಸಾ (25ನೇ ನಿ) ಮತ್ತು ನಯೀಮುದ್ದೀನ್‌ (60ನೇ ನಿ), ಮೀಸಲು ಪಡೆ ಪರ ವಸೀವುಲ್ಲಾ ಖಾನ್‌ (34ನೇ ನಿ) ಮತ್ತು ಜಯಂತ್ ಟರ್ಕಿ (59ನೇ ನಿ) ಗೋಲು ಗಳಿಸಿದರು.

‘ಡಿ’ ಗುಂಪಿನ ಹಾಕಿ ಒಡಿಶಾ ಮತ್ತು ಕೆನರಾ ಬ್ಯಾಂಕ್‌ ನಡುವಿನ ಪಂದ್ಯ ಗೋಲು ರಹಿತ ಡ್ರಾದಲ್ಲಿ ಮುಕ್ತಾಯಗೊಂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.