ADVERTISEMENT

ನ.19ರಿಂದ ಹೊನ್ನಾವರದಲ್ಲಿ ರಾಷ್ಟ್ರೀಯ ಮಟ್ಟದ ಅಂಧರ ಚೆಸ್ ಟೂರ್ನಿ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2024, 7:25 IST
Last Updated 8 ನವೆಂಬರ್ 2024, 7:25 IST
<div class="paragraphs"><p>ಸೂರ್ಯಕಾಂತ್ ಸಾರಂಗ</p></div>

ಸೂರ್ಯಕಾಂತ್ ಸಾರಂಗ

   

ಕಾರವಾರ: ರೋಟರಿ ಕ್ಲಬ್ ಹೊನ್ನಾವರ ಘಟಕದ ವತಿಯಿಂದ ನ.19, 20 ಮತ್ತು 21 ರಂದು ದೃಷ್ಟಿದೋಷವುಳ್ಳ ಜ್ಯೂನಿಯರ್ ರಾಷ್ಟ್ರೀಯ ಮಟ್ಟದ ಚೆಸ್ ಚಾಂಪಿಯನ್‌ಶಿಪ್ ಆಯೋಜಿಸಲಾಗಿದೆ ಎಂದು ರೋಟರಿ ಕ್ಲಬ್ ಅಧ್ಯಕ್ಷ ಸೂರ್ಯಕಾಂತ್ ಸಾರಂಗ ಹೇಳಿದರು.

ಇಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಸಂಪೂರ್ಣ ಮತ್ತು ಅರೆದೃಷ್ಟಿಯುಳ್ಳ ಕ್ರೀಡಾಪಟುಗಳು ಟೂರ್ನಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಆಲ್ ಇಂಡಿಯನ್ ಚೆಸ್ ಫೆಡರೇಶನ್ ಫಾರ್ ದಿ ಬ್ಲೈಂಡ್ ಮತ್ತು ಕರ್ನಾಟಕ ಸ್ಟೇಟ್ ಚೆಸ್ ಅಸೋಷಿಯೇಷನ್ ಫಾರ್ ವಿಷುವಲಿ ಚಾಲೆಂಜ್ ಟೂರ್ನಿಗೆ ಸಹಭಾಗಿತ್ವ ನೀಡಲಿದ್ದಾರೆ. ಹೊನ್ನಾವರದ ಕಾಸರಕೋಡಿನ ಮಯೂರಿ ಇಕೊ ಬೀಚ್ ರೆಸಾರ್ಟ್‌ನಲ್ಲಿ ಟೂರ್ನಿ ಆಯೋಜಿಸಲಾಗುತ್ತಿದೆ ಎಂದು ವಿವರಿಸಿದರು.

ADVERTISEMENT

ರಾಜ್ಯದಲ್ಲಿ ಇದುವರೆಗೆ ದೃಷ್ಟಿವುಳ್ಳ ಜೂನಿಯರ್ ಚೆಸ್ ಚಾಂಪಿಯನ್ ಶಿಪ್ ಒಂದು ಬಾರಿ ನಡೆದಿದ್ದು ಈಗ ಎರಡನೇ ಬಾರಿ ಈ ಚಾಂಪಿಯನ್‌ಶಿಪ್ ನಡೆಯುತ್ತಿದೆ. ಇದೊಂದು ಸವಾಲಿನ ಕೆಲಸವಾದರೂ ನಮ್ಮ ಸಾಮರ್ಥ್ಯ ನೋಡಿ ಆಯೋಜನೆಗೆ ರಾಷ್ಟ್ರೀಯ ಚೆಸ್ ಅಸೋಸಿಯೇಷನ್ ಅವಕಾಶ ನೀಡಿದೆ ಎಂದರು.

ಕಾರ್ಯಕ್ರಮದ ಇವೆಂಟ್ ಚೇರ್ಮನ್ ಶ್ರೀಕಾಂತ್ ನಾಯ್ಕ, ಚಾಂಪಿಯನ್ ಶಿಪ್‌ನಲ್ಲಿ ಗೆಲ್ಲುವ ನಾಲ್ಕು ಆಟಗಾರರು ಯುರೋಪ್ ಖಂಡದಲ್ಲಿ ನಡೆಯಲಿರುವ ಅಂತರರಾಷ್ಟ್ರೀಯ ಟೂರ್ನಿಯಲ್ಲಿ ಪಾಲ್ಗೊಳ್ಳಲು ಅರ್ಹತೆ ಪಡೆಯಲಿದ್ದಾರೆ ಎಂದರು.

ಟೂರ್ನಿಯಲ್ಲಿ ಪಾಲ್ಗೊಳ್ಳಲು ಬರುವ ಸ್ಪರ್ಧಾಗಳೊಂದಿಗೆ ಅವರು ಸಹಾಯಕರು ಆಗಮಿಸಲಿದ್ದಾರೆ. ಅವರಿಗೆ ಉಳಿದುಕೊಳ್ಳಲು ವಸತಿ ಸೌಕರ್ಯ ಕಲ್ಪಿಸಲಾಗಿದೆ. ಹೊರ ರಾಜ್ಯಗಳಿಂದ ಬರುವ ಸ್ಪರ್ಧಿಗಳು ರೈಲ್ವೆ ಮೂಲಕ ಆಗಮಿಸುತ್ತಿದ್ದು, ಹೊನ್ನಾವರ ಮತ್ತು ಮುರುಡೇಶ್ವರ ರೈಲು ನಿಲ್ದಾಣಗಳಿಂದ ಅವರನ್ನು ಕರೆತರಲು ಸೂಕ್ತ ವ್ಯವಸ್ಥೆ ಮಾಡಲಾಗಿದೆ. ಚೆಸ್ ಪಂದ್ಯಗಳನ್ನು ವೀಕ್ಷಣೆ ಮಾಡಲು ಸಾರ್ವಜನಿಕರಿಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ ಎಂದರು.

ಈಗಾಗಲೇ ಪಶ್ಚಿಮ ಬಂಗಾಳ, ಗುಜರಾತ್, ನವದೆಹಲಿ, ಮಹಾರಾಷ್ಟ್ರ, ಉತ್ತರಪ್ರದೇಶ, ತಮಿಳುನಾಡು ಹಾಗೂ ನಮ್ಮ ರಾಜ್ಯದ ಒಟ್ಟು 60 ಸ್ಪರ್ಧಿಗಳು ಭಾಗವಹಿಸುವ ನಿರೀಕ್ಷೆ ಇದೆ. ಪಂದ್ಯಾವಳಿಯಲ್ಲಿ ಭಾಗವಹಿಸುವ ಆಟಗಾರರ ಜೊತೆ ಅಷ್ಟೇ ಸಂಖ್ಯೆಯ ಸಹಾಯಕರು ಆಗಮಿಸಲಿದ್ದು ದೇಶದ ವಿವಿಧ ಭಾಗಗಳಿಂದ ಸುಮಾರು 100 ಜನರು ಈ ಚೆಸ್ ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದಾರೆ ಎಂದರು.

ಸ್ಪರ್ಧಾಳುಗಗೆ ಯಾವುದೇ ರೀತಿಯ ಶುಲ್ಕ ಇಲ್ಲ‌. ವಿಜೇತರಿಗೆ ನಗದು ಬಹುಮಾನ ಮತ್ತು ಫಲಕಗಳನ್ನು ನೀಡಲಾಗುವುದು ಎಂದರು.

ರೋಟರಿ ಅಸಿಸ್ಟೆಂಟ್ ಗವರ್ನರ್ ರಾಘವೇಂದ್ರ ಪ್ರಭು, ಎಸ್.ಎಂ.ಭಟ್, ಡಿ.ಜೆ. ನಾಯ್ಕ, ಕಾರ್ಯದರ್ಶಿ ಎಂ.ಎಂ.ಹೆಗಡೆ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.