ಬೆಂಗಳೂರು: ಮಂಗಳೂರು ವಿ.ವಿ, ಬೆಂಗಳೂರು ವಿ.ವಿ, ಬೆಳಗಾವಿ ವಿಟಿಯು ಮತ್ತು ಪುಣೆಯ ಸಾವಿತ್ರಿಭಾಯಿ ಫುಲೆ ವಿ.ವಿ ತಂಡಗಳು ತುಮಕೂರಿನ ಅಗಳಕೋಟೆಯ ಸಾಹೇ ವಿಶ್ವವಿದ್ಯಾಲಯದ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಅಖಿಲ ಭಾರತ ಪುರುಷರ ನೆಟ್‍ಬಾಲ್ ಚಾಂಪಿಯನ್‍ಷಿಪ್‌ನಲ್ಲಿ ಸೂಪರ್ ಲೀಗ್ ಹಂತಕ್ಕೆ ಪ್ರವೇಶ ಪಡೆದಿವೆ.
ಕೂಟದ ಮೂರನೇ ದಿನವಾದ ಗುರುವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯಗಳಲ್ಲಿ ಎಂಟು ತಂಡಗಳು ಸೆಣಸಾಡಿ, ನಾಲ್ಕು ತಂಡಗಳು ಸೋತು ಟೂರ್ನಿಯಿಂದ ಹೊರಬಿದ್ದವು.
ಮಂಗಳೂರು ವಿ.ವಿ ತಂಡವು 39–35ರಿಂದ ಮೈಸೂರು ವಿ.ವಿ ತಂಡವನ್ನು ಮಣಿಸಿತು. ಆರಂಭದಲ್ಲಿ ಮೈಸೂರು ತಂಡವು ಮುನ್ನಡೆ ಸಾಧಿಸಿದರೂ ನಂತರದಲ್ಲಿ ಮುಗ್ಗರಿಸಿತು. ಮತ್ತೊಂದು ಪಂದ್ಯದಲ್ಲಿ ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ತಂಡವು 35–31ರಿಂದ ಕ್ಯಾಲಿಕಟ್ ವಿಶ್ವವಿದ್ಯಾಲಯ ತಂಡವನ್ನು ಸೋಲಿಸಿತು.
ಇತರ ಪಂದ್ಯಗಳಲ್ಲಿ ಬೆಂಗಳೂರು ವಿ.ವಿ ತಂಡವು 37–32 ಕರ್ನಾಟಕದ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ತಂಡದ ವಿರುದ್ಧ ಗೆಲುವು ಸಾಧಿಸಿದರೆ, ಪುಣೆ ಸಾವಿತ್ರಿಭಾಯಿ ಫುಲೆ ವಿ.ವಿ ತಂಡವು 32–24 ರಿಂದ ಬೆಂಗಳೂರು ನಗರ ವಿ.ವಿ ತಂಡವನ್ನು ಸೋಲಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.