ADVERTISEMENT

ಸಸಿಹಿತ್ಲು ಬೀಚ್‌ನಲ್ಲಿ ರಾಷ್ಟ್ರೀಯ ಓಪನ್ ಸರ್ಫಿಂಗ್ 31ರಿಂದ

​ಪ್ರಜಾವಾಣಿ ವಾರ್ತೆ
Published 20 ಮೇ 2024, 16:22 IST
Last Updated 20 ಮೇ 2024, 16:22 IST
ಕಿಶೋರ್ ಕುಮಾರ್
ಕಿಶೋರ್ ಕುಮಾರ್   

ಮಂಗಳೂರು: ಭಾರತ ಸರ್ಫಿಂಗ್ ಫೆಡರೇಷನ್‌ (ಎಸ್‌ಎಫ್ಐ) ಆಯೋಜಿಸುವ ರಾಷ್ಟ್ರೀಯ ಓಪನ್ ಸರ್ಫಿಂಗ್ ಚಾಂಪಿಯನ್‌ಷಿಪ್‌ ಇದೇ 31ರಿಂದ ಜೂನ್ 5ರ ವರೆಗೆ ಮಂಗಳೂರು ಸಮೀಪದ ಸಸಿಹಿತ್ಲು ಬೀಚ್‌ನಲ್ಲಿ ನಡೆಯಲಿದೆ.

ಇದು ಚಾಂಪಿಯನ್‌ಷಿಪ್‌ನ ಐದನೇ ಆವೃತ್ತಿ ಆಗಿದ್ದು ನಗರದ ಮಂತ್ರ ಸರ್ಫ್ ಕ್ಲಬ್‌ ಆಶ್ರಯದಲ್ಲಿ ನಡೆಯಲಿದೆ. ದೇಶದ ಅಗ್ರ ಕ್ರಮಾಂಕದ ಸರ್ಫರ್‌ಗಳು ಪಾಲ್ಗೊಳ್ಳಲಿದ್ದಾರೆ. ಮಾರ್ಚ್ ಕೊನೆಯ ವಾರದಲ್ಲಿ ಕೇರಳದ ವರ್ಕಲದಲ್ಲಿ ನಡೆದ ಈ ಋತುವಿನ ಮೊದಲ ಸ್ಪರ್ಧೆಯ 16 ವರ್ಷದೊಳಗಿನವರ ವಿಭಾಗದಲ್ಲಿ ಪ್ರಶಸ್ತಿ ಗೆದ್ದ ಕಿಶೋರ್ ಕುಮಾರ್ ಬರುವುದು ಖಚಿತವಾಗಿದೆ.

ಹಿಂದಿನ ನಾಲ್ಕು ಆವೃತ್ತಿಗಳ ಸ್ಪರ್ಧೆಗಳು ಕರ್ನಾಟಕದಲ್ಲೇ ನಡೆದಿದ್ದವು. ಈ ಬಾರಿ ಪುರುಷರು, ಮಹಿಳೆಯರು, 16 ವರ್ಷದೊಳಗಿನ ಬಾಲಕರು ಮತ್ತು ಬಾಲಕಿಯರ ವಿಭಾಗದಲ್ಲಿ ಸರ್ಫರ್‌ಗಳು ಸಾಮರ್ಥ್ಯ ತೋರಲಿದ್ದಾರೆ. ಇಲ್ಲಿ ಲಭಿಸುವ ರ‍್ಯಾಂಕಿಂಗ್ ಪಾಯಿಂಟ್‌ಗಳು ಋತುವಿನ ಅಂತ್ಯದಲ್ಲಿ ಸರ್ಫರ್‌ಗಳ ಸ್ಥಾನ ನಿರ್ಧರಿಸುವಲ್ಲಿ ನಿರ್ಣಾಯಕ ಆಗಿರುವುದರಿಂದ ತುರುಸಿನ ಪೈಪೋಟಿ ಕಂಡುಬರುವ ಸಾಧ್ಯತೆ ಇದೆ ಎಂದು ಎಸ್‌ಎಫ್‌ಐ ಅಭಿಪ್ರಾಯಪಟ್ಟಿದೆ. 

ADVERTISEMENT

‘ಈ ಋತುವಿನ ಮೊದಲ ಎರಡು ಸ್ಪರ್ಧೆಗಳನ್ನು ಪಶ್ಚಿಮ ಕರಾವಳಿಯಲ್ಲಿ ನಡೆಸಲು ನಿರ್ಧರಿಸಲಾಗಿದೆ. ಕೇರಳದಲ್ಲಿ ಯಶಸ್ಸು ಕಂಡ ನಂತರ ಮಂಗಳೂರಿಗೆ ಕಾಲಿಟ್ಟಿದ್ದು ಮೂರನೇ ಸ್ಪರ್ಧೆಗಾಗಿ ಪೂರ್ವ ಕರಾವಳಿಯತ್ತ ಸಾಗಲಿದ್ದೇವೆ’ ಎಂದು ಫೆಡರೇಷನ್‌ ಅಧ್ಯಕ್ಷ ಅರುಣ್ ವಾಸು ತಿಳಿಸಿದ್ದಾರೆ. ಪುರುಷರ ವಿಭಾಗದ ರಮೇಶ್ ಬೂದಿಹಾಳ, ಹರೀಶ್ ಎಂ, ಶ್ರೀಕಾಂತ್‌ ಡಿ, ಮಣಿಕಂಠನ್‌ ಎಂ, ಮಹಿಳೆಯರ ವಿಭಾಗದಲ್ಲಿ ಕೋಮಲಿ ಮೂರ್ತಿ, ಸೃಷ್ಟಿ ಸೆಲ್ವಂ ಮತ್ತು ಸಂಧ್ಯಾ ಅರುಣ್‌ ಗಮನ ಸೆಳೆಯಲಿದ್ದಾರೆ ಎಂದು ಅವರು ವಿವರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.