ನವದೆಹಲಿ: ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಪಿಸ್ತೂಲ್ ಶೂಟಿಂಗ್ ಮಿಶ್ರ ತಂಡ ವಿಭಾಗದಲ್ಲಿ ಕಂಚು ಗೆದ್ದ ಮನು ಭಾಕರ್ ಸರಬ್ಜೋತ್ ಸಿಂಗ್ ಅವರಿಗೆ ಮಾರ್ಗದರ್ಶನ ನೀಡಿದ ಸಮರೇಶ್ ಜಂಗ್ ಅವರಿಗೆ ಸ್ವದೇಶಕ್ಕೆ ಬಂದಿಳಿದ ಕೂಡಲೇ ಆಘಾತಕಾರಿ ಸುದ್ದಿಯೊಂದು ಸಿಕ್ಕಿತು.
ಅವರ ಕುಟುಂಬವು 75 ವರ್ಷಗಳಿಂದ ವಾಸವಿರುವ ಮನೆಯು ಅಕ್ರಮವಾಗಿದ್ದು, ನೆಲಸಮಗೊಳಿಸಲಾಗುವುದು ಎಂದು ಸ್ಥಳೀಯ ಆಡಳಿತವು ನೋಟಿಸ್ ನೀಡಿದೆ. ಅಲ್ಲದೇ 48 ಗಂಟೆಗಳಲ್ಲಿಯೇ ಮನೆಯನ್ನು ಖಾಲಿ ಮಾಡಬೇಕು ಎಂದೂ ನೋಟಿಸ್‌ನಲ್ಲಿ ಸೂಚಿಸಲಾಗಿದೆ.
ಸ್ವತಃ ಒಲಿಂಪಿಯನ್ ಶೂಟರ್ ಆಗಿರುವ ಸಮರೇಶ್ ಅವರು ‘ಗೋಲ್ಡನ್ ಫಿಂಗರ್’ ಎಂದೇ ಖ್ಯಾತನಾಮರಾಗಿದ್ದಾರೆ. 2006 ಮತ್ತು 2010ರ ಕಾಮನ್‌ವೆಲ್ತ್ ಗೇಮ್ಸ್‌ಗಳಲ್ಲಿ ಅವರು ಏಳು ಚಿನ್ನ, ಐದು ಬೆಳ್ಳಿ ಮತ್ತು ಎರಡು ಕಂಚಿನ ಪದಕಗಳನ್ನು ಗೆದ್ದಿದ್ದಾರೆ.
‘ಈ ಜಾಗದಲ್ಲಿ ನಮ್ಮ ಕುಟುಂಬವು 75 ವರ್ಷಗಳಿಂದ ವಾಸವಾಗಿದೆ. ಸಿಂಗ್ ಎಂಬುವವರು ಲೀಸ್ ಪಡೆದುಕೊಂಡಿರುವ ಜಾಗ ಇದು. ಬಹಳ ವರ್ಷಗಳಿಂದ ನಾವು ಅವರಿಗೆ ಬಾಡಿಗೆ ಪಾವತಿಸುತ್ತಿದ್ದೇವೆ’ ಎಂದು ಸಮರೇಶ್ ಹೇಳಿದ್ದಾರೆ.
‘ಭೂ ಅಭಿವೃದ್ದಿ ಇಲಾಖೆ ಕಚೇರಿಯು ನಿನ್ನೆ (ಗುರುವಾರ) ನೋಟಿಸ್ ಜಾರಿಗೊಳಿಸಿದೆ. ಆದರೆ ನಾನು ಪ್ಯಾರಿಸ್‌ನಿಂದ ಮರಳಿದ ನಂತರವಷ್ಟೇ ನನಗೆ ಈ ವಿಷಯ ತಿಳಿಯಿತು’ ಎಂದು ಹೇಳಿದರು.
ಸಮರೇಶ್ ಅವರ ನಿವಾಸವು ಸಿವಿಲ್ ಲೈನ್ಸ್ ಪ್ರದೇಶದಲ್ಲಿದೆ. ಇಲ್ಲಿರುವ 200 ಕುಟುಂಬಗಳಿಗೂ ಎರಡು ದಿನಗಳಲ್ಲಿ ಮನೆಗಳನ್ನು ಖಾಲಿ ಮಾಡುವಂತೆ ನೋಟಿಸ್ ಜಾರಿ ಮಾಡಲಾಗಿದೆ.
ಸಮರೇಶ್ ಮತ್ತಿತರರು ಈಗ ಕೋರ್ಟ್ ಮೊರೆ ಹೋಗಿದ್ದಾರೆ. ಡೆಲ್ಲಿ ಹೈಕೋರ್ಟ್ ಸೋಮವಾರ ವಿಚಾರಣೆ ನಡೆಸಲಿದೆ.
‘ನಾನು ಕಾನೂನಿಗಿಂತ ದೊಡ್ಡವನಲ್ಲ. ಕಾನೂನಿ ಪ್ರಕಾರ ಯಾವುದೇ ಸೂಚನೆ ಬಂದರೂ ಪಾಲಿಸುತ್ತೇನೆ. ಮನೆಯನ್ನು ಖಾಲಿ ಮಾಡಲೂ ಸಿದ್ಧವಿದ್ದೇವೆ. ಆದರೆ ಎರಡು ದಿನಗಳಲ್ಲಿ ಖಾಲಿ ಮಾಡುವುದು ಹೇಗೆ ಸಾಧ್ಯ. ಒಂದೆರಡು ತಿಂಗಳುಗಳ ಸಮಯವನ್ನಾದರೂ ನೀಡಬೇಕು‘ ಎಂದು ಸಮರೇಶ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.