ನವದೆಹಲಿ: ಅಂತರರಾಷ್ಟ್ಟೀಯ ಮಟ್ಟದ ಕ್ರೀಡೆಗಳಲ್ಲಿ ಉತ್ತಮ ಸಾಧನೆ ಮಾಡಿದ ಭಾರತದ ಅಥ್ಲೀಟ್‌ಗಳಿಗೆ ಮಂಗಳವಾರ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.
ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ಯಾರಾ ಆರ್ಚರಿಪಟು ಶೀತಲ್ ದೇವಿ ಮತ್ತು ಕ್ರಿಕೆಟಿಗ ಮೊಹಮ್ಮದ್ ಶಮಿ ಅವರು ಸೇರಿದಂತೆ 26 ಅಥ್ಲೀಟ್‌ಗಳಿಗೆ ಅರ್ಜುನ ಪ್ರಶಸ್ತಿ ನೀಡಲಾಯಿತು. ಗಾಲಿಕುರ್ಚಿಯಲ್ಲಿದ್ದ ಪ್ಯಾರಾ ಅಥ್ಲೀಟ್ ಪ್ರಾಚಿ ಯಾದವ್ ಅವರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರೇ ವೇದಿಕೆಯಿಂದ ಇಳಿದು ಬಂದು ಪ್ರಶಸ್ತಿ ನೀಡಿದರು. ಭವನದಲ್ಲಿ ಚಪ್ಪಾಳೆಯ ಸದ್ದು ಪ್ರತಿಧ್ವನಿಸಿತು. ಹ್ಯಾಂಗ್‌ಝೌ ಪ್ಯಾರಾ ಏಷ್ಯನ್ ಗೇಮ್ಸ್‌ನಲ್ಲಿ ಪ್ರಾಚಿ ಚಿನ್ನದ ಪದಕ ಜಯಿಸಿದ್ದರು.
ಬ್ಯಾಡ್ಮಿಂಟನ್ ಡಬಲ್ಸ್ ಜೋಡಿ ಚಿರಾಗ್ ಶೆಟ್ಟಿ ಮತ್ತು ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ ಅವರಿಗೆ ಅತ್ಯುನ್ನತ ಕ್ರೀಡಾ ಪ್ರಶಸ್ತಿಯಾದ ಮೇಜರ್ ಧ್ಯಾನಚಂದ್ ಖೇಲ್ ರತ್ನ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಅವರು ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದು ದಾಖಲೆ ಬರೆದಿದ್ದರು. ಏಷ್ಯನ್ ಚಾಂಪಿಯನ್‌ಷಿಪ್ ಮತ್ತು ಇಂಡೋನೆಷ್ಯಾ ಓಪನ್ ಸೂಪರ್ 1000 ಪ್ರಶಸ್ತಿ ಕೂಡ ಗಳಿಸಿದ್ದರು. ಸದ್ಯ ಚಿರಾಗ್ –ಸಾತ್ವಿಕ್ ಮಲೇಷ್ಯಾ ಓಪನ್ ಟೂರ್ನಿಯಲ್ಲಿ ಆಡುತ್ತಿದ್ದಾರೆ. ಆದ್ದರಿಂದ ಅವರು ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಹಾಜರಾಗಲಿಲ್ಲ.
ಶೂಟಿಂಗ್ ಕ್ರೀಡಾಪಟು ಇಶಾ ಸಿಂಗ್ ಅವರು ಕಾರ್ಯಕ್ರಮಕ್ಕೆ ಗೈರುಹಾಜರಾದರು. ಅವರು ಜಕಾರ್ತದಲ್ಲಿ ನಡೆಯುತ್ತಿರುವ ಏಷ್ಯಾ ಒಲಿಂಪಿಕ್ ಕ್ವಾಲಿಫೈಯರ್ ಶೂಟಿಂಗ್‌ನಲ್ಲಿ ಸ್ಪರ್ಧಿಸಿದ್ದಾರೆ.
ಪ್ರತಿಬಾರಿಯೂ ಈ ಸಮಾರಂಭವು ಮೇಜರ್ ಧ್ಯಾನಚಂದ್ ಜನ್ಮದಿನ ಮತ್ತು ಕ್ರೀಡಾ ದಿನವಾದ ಆಗಸ್ಟ್ 29ರಂದು ಆಯೋಜಿಸಲಾಗುತ್ತದೆ. ಆದರೆ ಹೋದ ವರ್ಷ ಏಷ್ಯನ್ ಕ್ರೀಡಾಕೂಟವು ಸೆಪ್ಟೆಂಬರ್ –ಅಕ್ಟೋಬರ್‌ನಲ್ಲಿ ನಡೆದಿದ್ದರಿಂದ ಪ್ರಶಸ್ತಿ ಪ್ರದಾನ ಸಮಾರಂಭದ ದಿನಾಂಕ ಬದಲಿಸಲಾಗಿದೆ.
ಚೆಸ್ ಗ್ರ್ಯಾಂಡ್‌ಮಾಸ್ಟರ್ ಆರ್. ವೈಶಾಲಿ, ಕುಸ್ತಿಪಟು ಅಂತಿಮ್ ಪಂಘಾಲ್, ಬಾಕ್ಸರ್ ಮೊಹಮ್ಮದ್ ಹುಸಾಮುದ್ದೀನ್, ಆಥ್ಲೀಟ್ ಪಾರುಲ್ ಚೌಧರಿ ಅವರೂ ಅರ್ಜುನ ಗೌರವಕ್ಕೆ ಪಾತ್ರರಾದರು.
ಗ್ರ್ಯಾಂಡ್‌ಮಾಸ್ಟರ್ ಪ್ರಜ್ಞಾನಂದ ಅವರ ಕೋಚ್ ಆರ್.ಬಿ. ರಮೇಶ್ ಅವರು ದ್ರೋಣಾಚಾರ್ಯ ಗೌರವಕ್ಕೆ ಪಾತ್ರರಾದರು.
ಖೇಲ್ ರತ್ನ ಪ್ರಶಸ್ತಿ ವಿಜೇತರಿಗೆ ₹ 25 ಲಕ್ಷ, ಅರ್ಜುನ್ ಮತ್ತು ದ್ರೋಣಾಚಾರ್ಯ ಪ್ರಶಸ್ತಿ ವಿಜೇತರಿಗೆ ತಲಾ ₹ 15 ಲಕ್ಷ ನೀಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.