ಪ್ಯಾರಿಸ್: ಭಾರತದ ಜಾವೆಲಿನ್ ಥ್ರೋ ತಾರೆ ನವದೀಪ್ ಸಿಂಗ್ ಪ್ಯಾರಾಲಿಂಪಿಕ್ಸ್‌ನ ಪುರುಷರ ಜಾವೆಲಿನ್ ಥ್ರೋ ಎಫ್ 41 ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ.
ನವದೀಪ್ ಆರಂಭದಲ್ಲಿ ಬೆಳ್ಳಿ ಪದಕ ಗೆದ್ದಿದ್ದರು. ಫೈನಲ್‌ನಲ್ಲಿ ಅಗ್ರಸ್ಥಾನ ಪಡೆದಿದ್ದ ಇರಾನ್‌ನ ಸಾಡೆಗ್ ಬೀತ್ ಸಯಾಹ್ ಅನರ್ಹಗೊಂಡ ಕಾರಣ ಭಾರತದ ಅಥ್ಲೀಟ್‌ಗೆ ಚಿನ್ನ ಒಲಿಯಿತು.
ಪುರುಷರ ಜಾವೆಲಿನ್ ಎಫ್41 ವಿಭಾಗದಲ್ಲಿ ಭಾರತ ಗೆದ್ದ ಮೊದಲ ಚಿನ್ನದ ಪದಕ ಇದಾಗಿದೆ.
ಮೂರು ವರ್ಷಗಳ ಹಿಂದೆ ಟೋಕಿಯೊ ಕ್ರೀಡಾಕೂಟದಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದ ಹರಿಯಾಣದ 23 ವರ್ಷದ ನವದೀಪ್ ಸಿಂಗ್, ಈ ಬಾರಿ 47.32 ಮೀಟರ್ ವೈಯಕ್ತಿಕ ಶ್ರೇಷ್ಠ ಸಾಧನೆಯೊಂದಿಗೆ ಚಾಂಪಿಯನ್ ಆದರು. ಚೀನಾದ ಸನ್ ಪೆಂಗ್‌ಕ್ಸಿಯಾಂಗ್ (44.72 ಮೀ) ಮತ್ತು ಇರಾಕ್‌ನ ನುಖೈಲಾವಿ ವೈಲ್ಡಾನ್ (40.46 ಮೀ) ಕ್ರಮವಾಗಿ ಬೆಳ್ಳಿ ಮತ್ತು ಕಂಚು ಗೆದ್ದರು.
ನವದೀಪ್ ಅವರು ಮೊದಲ ಪ್ರಯತ್ನದಲ್ಲಿ ಫೌಲ್ ಆದರು. ಆದರೆ, ಎರಡನೇ ಪ್ರಯತ್ನದಲ್ಲಿ 46.39 ಮೀಟರ್ ದೂರ ಎಸೆದು ಎರಡನೇ ಸ್ಥಾನಕ್ಕೆ ಏರಿದರು. ಮೂರನೇ ಪ್ರಯತ್ನದಲ್ಲಿ ಮತ್ತಷ್ಟು ಉತ್ತಮಪಡಿಸಿದರು.
ಎಫ್41 ವಿಭಾಗದಲ್ಲಿ ಎತ್ತರ ಕಡಿಮೆ ಇರುವ ಕ್ರೀಡಾಪಟುಗಳು ಸ್ಪರ್ಧಿಸುತ್ತಾರೆ.
ಸಾಡೆಗ್ ಅನರ್ಹ: ಸಾಡೆಗ್ ಫೈನಲ್‌ನ ಐದನೇ ಪ್ರಯತ್ನದಲ್ಲಿ 47.64 ಮೀಟರ್ ದಾಖಲೆಯ ಎಸೆತದೊಂದಿಗೆ ಅಗ್ರಸ್ಥಾನಿಯಾಗಿದ್ದರು. ಆದರೆ, ಆಕ್ಷೇಪಾರ್ಹ ಧ್ವಜವನ್ನು ಪದೇ ಪದೇ ಪ್ರದರ್ಶಿಸಿದ ಕಾರಣ ಫೈನಲ್ ನಡೆದ ಕೆಲವೇ ಹೊತ್ತಿನಲ್ಲಿ ಅವರನ್ನು ಅನರ್ಹಗೊಳಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.