ಲಾಸ್ ಏಂಜಲ್ಸ್: ನಿವೃತ್ತರಾಗಿದ್ದ ಅಮೆರಿಕದನ್ಯಾಷನಲ್ ಬ್ಯಾಸ್ಕೆಟ್‌ಬಾಲ್ ಅಸೋಸಿಯೇಷನ್ (ಎನ್‌ಬಿಎ) ತಾರೆ ಕೋಬಿಬ್ರಯಾಂಟ್ (41) ಮತ್ತು ಅವರ ಪುತ್ರಿ ಜಿಯಾನಾ (13) ಭಾನುವಾರ ಇಲ್ಲಿನ ಕಾಲಿಫೋರ್ನಿಯಾದ ಕ್ಯಾಲಬಾಸಸ್ ಬಳಿ ಸಂಭವಿಸಿದ ಹೆಲಿಕಾಪ್ಟರ್ ಪತನಗೊಂಡು ಮೃತಪಟ್ಟಿದ್ದಾರೆ.
‘ಪೈಲಟ್ ಸೇರಿ ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಸುತ್ತಿದ್ದ ಎಲ್ಲ 9 ಮಂದಿ ಮೃತಪಟ್ಟಿದ್ದಾರೆ’ ಎಂದು ಲಾಸ್ ಏಂಜೆಲಿಸ್ ಕೌಂಟಿ ಶೆರಿಫ್ ಅಲೆಕ್ಸ್ ವಿಲ್ಲಾನುಯೆವಾ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಕಡಿದಾದ ಪ್ರದೇಶದಲ್ಲಿ ಈ ಅವಘಡ ನಡೆದಿರುವ ಮೃತದೇಹಗಳ ಹುಡುಕಾಟಕ್ಕೆ ಕೆಲದಿನಗಳು ಹಿಡಿಯಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಲಾಸ್ ಏಂಜಲಿಸ್‌ಲೇಕರ್ಸ್ ತಂಡಕ್ಕೆ ಆಡುತ್ತಿದ್ದ ಬ್ರಯಾಂಟ್ 2016ರಲ್ಲಿ ನಿವೃತ್ತರಾಗಿದ್ದರು. ವೃತ್ತಿ ಜೀವನದ 20 ವರ್ಷವೂ ಒಂದೇ ತಂಡಕ್ಕೆ ಆಡಿದ್ದರು. ಅವರು ಗಳಿಸಿದ್ದು 33,643 ಪಾಯಿಂಟ್ಸ್!
ಎನ್‌ಬಿಎ ಶೋಕ
ಬ್ರಯಾಂಟ್ ಹಠಾತ್ ಸಾವಿನ ಸುದ್ದಿಯನ್ನು ಅರಗಿಸಿಕೊಳ್ಳಲಾಗದೇ ಎನ್‌ಬಿಎ ಶೋಕದ ಮಡುವಿನಲ್ಲಿದೆ. ಡೆನ್ವರ್‌ನಲ್ಲಿ ಹ್ಯೂಸ್ಟನ್ ರಾಕೆಟ್ಸ್ ಮತ್ತು ನಜೆಟ್ಸ್ ನಡುವೆ ನಡೆದ ಪಂದ್ಯದ ವೇಳೆ ಮೌನಾಚರಣೆ ನಡೆಯಿತು. ಡಲ್ಲಾಸ್ ಮಾವೆರಿಕ್ಸ್ ತಂಡ. ‘24’ ಸಂಖ್ಯೆಗೆ ನಿವೃತ್ತಿ ನೀಡುವುದಾಗಿ ಪ್ರಕಟಿಸಿದೆ. ಇತರ ತಂಡಗಳೂ ಇದೇ ನಿರ್ಧಾರಕ್ಕೆ ಬರುವ ಸಾಧ್ಯತೆ ಇದೆ. ಬ್ರಯಾಂಟ್ ಈ ನಂಬರ್ ಇರುವ ಜೆರ್ಸಿ ತೊಡುತ್ತಿದ್ದರು.
ಸುದ್ದಿ ಕೇಳಿದ ನಂತರದಿಂದ ಮೈದಾನಕ್ಕಿಳಿಯಲು ಕಷ್ಟವಾಗುತ್ತಿದೆ ಎಂದು ಎನ್‌ಬಿಎಯ ಹಲವು ಸ್ಟಾರ್ ಆಟಗಾರರು ವ್ಯಥೆ ಪಟ್ಟಿದ್ದಾರೆ. ‘ಸಾವಿನ ಸುದ್ದಿಯಿಂದ ತಳಮಳಗೊಂಡೆ. ಹೇಗೆ ಆಡಬೇಕೆಂದೇ ಗೊತ್ತಾಗಲಿಲ್ಲ’ ಎಂದು ಪೋರ್ಟ್‌ಲ್ಯಾಂಡ್ಸ್ ತಂಡದ ಡೇಮಿಯನ್ ಲಿಲಾರ್ಡ್ ಹೇಳಿದರು. ಇಂಡಿಯಾನ ವಿರುದ್ಧ 139–129 ಗೆಲುವಿನಲ್ಲಿ ಲಿಲಾರ್ಡ್ 50 ಪಾಯಿಂಟ್ಸ್ ಸ್ಕೋರ್ ಮಾಡಿದ್ದರು.
‘ಇದು ನನ್ನ ಬದುಕಿನ ಅತ್ಯಂತ ದುಃಖದ ದಿನ. ನನ್ನ ಕುಟುಂಬ ಸದಸ್ಯರು ಇಡೀ ದಿನ ಕೋಬ್ ಕುರಿತಾದ ವಿಷಯವನ್ನೇ ಹಂಚಿಕೊಂಡರು. ಇದೊಂದು ದುಃಸ್ವಪ್ನ’ ಎಂದು ಇತ್ತೀಚೆಗಷ್ಟೇ ನಿವೃತ್ತರಾದ ಮಿಯಾಮಿ ಹೀಟ್ ಆಟಗಾರ ಡ್ವೇಯ್ನ್ ವೇಡ್ ಹೇಳಿದರು.
‘ಅಂಕಣದಲ್ಲಿ ಬ್ರಯಾಂಟ್ ಮೂಡಿಸಿದ್ದ ಛಾಪನ್ನು ವಿವರಿಸಲು ಪದಗಳೇ ನಿಲುಕುತ್ತಿಲ್ಲ’ ಎಂದು ಲಾಸ್ ಏಂಜಲಿಸ್ ಕ್ಲಿಪರ್ಸ್‌ನ ಲಿಯೊನಾರ್ಡ್ ಹೇಳಿದರು.
ನಿಧಾನಗತಿಯಲ್ಲಿ ಆಟ ಆರಂಭಿಸುವ ಪರಿಪಾಠ ಹೊಂದಿದ್ದ ಬ್ರಯಾಂಟ್, ನಾಲ್ಕನೇ ಕ್ವಾರ್ಟರ್ ಬಂದಂತೆ ಸಂಪೂರ್ಣ ಪ್ರಭುತ್ವ ಸಾಧಿಸುತ್ತಿದ್ದರು. ಅವರ ಅವಧಿಯಲ್ಲಿ ತಂಡ 18 ಬಾರಿ ಆಲ್‌ಸ್ಟಾರ್ ಮತ್ತು ಐದು ಬಾರಿ ಎನ್‌ಬಿಎ ಚಾಂಪಿಯನ್ ಆಗಿದೆ.
ಬ್ರಯಾಂಟ್ ಪರಿಚಯ
ಮಾಜಿ ಬಾಸ್ಕೆಟ್‌ಬಾಲ್ ಆಟಗಾರ ಜೋ ‘ಜೆಲ್ಲಿಬೀನ್’ ಬ್ರಯಾಂಟ್ ಮಗ ಕೋಬಿ ಬ್ರಯಾಂಟ್ ಫೆಲಿಡೆಲ್ಫಿಯಾದಲ್ಲಿ 1978ರಲ್ಲಿ ಜನಿಸಿದರು.ತಮ್ಮ 17ನೇ ವಯಸ್ಸಿಗೆ ಎನ್‌ಬಿಎ ಆಟಕ್ಕೆ ನೇರವಾಗಿಅರ್ಹತೆ ಪಡೆದುಕೊಂಡರು.
ತಮ್ಮ 18ನೇ ವಯಸ್ಸಿನಲ್ಲಿ ಬ್ರಯಾಂಟ್ ಎನ್‌ಬಿಎದ ಅತ್ಯಂತ ಕಿರಿಯ ಆಟಗಾರ ಎನಿಸಿಕೊಂಡಿದ್ದರು. ಎನ್‌ಬಿಎ ಸ್ಲಾಮ್ ಡಂಕ್ ಸ್ಪರ್ಧೆ ಜಯಿಸಿದ ಮೊದಲ ಆಟಗಾರನೆಂಬ ಕೀರ್ತಿಯೂ ಅವರದಾಯಿತು.
2003ರಲ್ಲಿ ಅತ್ಯಾಚಾರದ ಆರೋಪ ಕೇಳಿ ಬಂದ ನಂತರ ಬ್ರಯಾಂಟ್ ವೃತ್ತಿಜೀವನ ಕೊನೆಗೊಂಡಿತು ಎಂದೇ ಎಲ್ಲರೂ ಭಾವಿಸಿದ್ದರು.2004ರಲ್ಲಿ ಖಾಸಗಿಯಾಗಿ ಪರಿಹಾರ ಪಾವತಿಸಿಈ ಪ್ರಕರಣವನ್ನು ಬ್ರಯಾಂಟ್ ಇತ್ಯರ್ಥಪಡಿಸಿಕೊಂಡರು.
ನಿವೃತ್ತಿಯ ನಂತರ ಮನರಂಜನಾ ಕ್ಷೇತ್ರದಲ್ಲಿ ಸಕ್ರಿಯರಾದರು. 2018ರಲ್ಲಿ ಬ್ರಯಾಂಟ್ ರೂಪಿಸಿದ್ದ ಅನಿಮೇಶನ್ ಕಿರುಚಿತ್ರ ‘ಡಿಯರ್ ಬಾಸ್ಕೆಟ್‌ಬಾಲ್’ಆಸ್ಕರ್ ಗೌರವಕ್ಕೆ ಪಾತ್ರವಾಯಿತು. ತಮಗೆ ಜನಪ್ರಿಯತೆ ಮತ್ತು ಅದೃಷ್ಟ ತಂದುಕೊಟ್ಟ ಕ್ರೀಡೆಗೆ ಬ್ರಯಾಂಟ್ ಬರೆದಿರುವ ಪ್ರೇಮಪತ್ರವೇ ಈ ಕಿರುಚಿತ್ರವಾಗಿ ರೂಪುಗೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.