ನವದೆಹಲಿ: ಒಲಿಂಪಿಕ್ ‘ಟೆಸ್ಟ್’ನಲ್ಲಿ ತೋರಿದ ಸಾಮರ್ಥ್ಯ ಭಾರತ ವನಿತಾ ಹಾಕಿ ತಂಡದ ಆತ್ಮವಿಶ್ವಾಸ ಇಮ್ಮಡಿಗೊಳಿಸಿದೆ. ಆದರೆ ಎಫ್‌ಐಎಚ್ ಒಲಿಂಪಿಕ್ ಕ್ವಾಲಿಫೈಯರ್ಸ್‌ಗೆ ಸಿದ್ಧವಾಗುತ್ತಿರುವ ಹೊತ್ತಿನಲ್ಲಿ ಕೆಲವೊಂದು ಅಂಶಗಳತ್ತ ಗಮನಹರಿಸಬೇಕಿದೆ ಎಂದು ತಂಡದ ನಾಯಕಿ ರಾಣಿ ರಾಂಪಾಲ್ ತಿಳಿಸಿದ್ದಾರೆ.
ಒಲಿಂಪಿಕ್ ಹಾಕಿ ಟೆಸ್ಟ್‌ನ ಫೈನಲ್ ಪಂದ್ಯದಲ್ಲಿ ಆತಿಥೇಯ ಜಪಾನ್ ತಂಡವನ್ನು ಭಾರತ 2–1ರಿಂದ ಮಣಿಸಿತ್ತು.
‘ಒಲಿಂಪಿಕ್ ‘ಟೆಸ್ಟ್’ನಲ್ಲಿ ನಾವು ಅಜೇಯವಾಗಿ ಫೈನಲ್ ಗೆದ್ದಿದ್ದು ನಂಬಲಸಾಧ್ಯ. ವಿವಿಧ ತರಬೇತಿ ಶಿಬಿರಗಳಲ್ಲಿ ಆಟಗಾರ್ತಿಯರು ಶ್ರಮಪಟ್ಟಿದ್ದಕ್ಕೆ ಫಲ ದೊರೆತಿದೆ. ಈ ಟೂರ್ನಿಯ ವಿಜಯವು ಮುಂಬರುವ ಇಂಗ್ಲೆಂಡ್ ಪ್ರವಾಸ ಹಾಗೂ ಎಫ್‌ಐಎಚ್ ಒಲಿಂಪಿಕ್ ಕ್ವಾಲಿಫೈಯರ್ಸ್‌ಗೆ ಸಿದ್ಧವಾಗುತ್ತಿರುವ ನಮ್ಮ ಆತ್ಮವಿಶ್ವಾಸ ಹೆಚ್ಚಿಸಿದೆ’ ಎಂದು ರಾಣಿ ಹೇಳಿದ್ದಾರೆ.
‘ಒಂದಷ್ಟು ಅಂಶಗಳಲ್ಲಿ ನಾವು ಇನ್ನಷ್ಟು ಸುಧಾರಿಸಬೇಕು. ಆದರೂ ತಂಡ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸುವ ವಿಶ್ವಾಸವಿದೆ. ಒಲಿಂಪಿಕ್ ಟೆಸ್ಟ್ ನಮ್ಮ ಆಟದ ಮಟ್ಟವನ್ನು ಅವಲೋಕಿಸಿಕೊಳ್ಳಲು ಸಹಕಾರಿಯಾಯಿತು. ಒಲಿಂಪಿಕ್‌ಗೆ ಅರ್ಹತೆ ಪಡೆಯಲು ನಮ್ಮ ತಂಡ ಸರಿಯಾದ ಮಾರ್ಗದಲ್ಲಿ ಸಾಗುತ್ತಿದೆ’ ಎಂದು ಅವರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.