ADVERTISEMENT

ಡೈಮಂಡ್ ಲೀಗ್‌ನಲ್ಲಿ ‘ಚಿನ್ನದ ಹುಡುಗ’ನ ಮೇಲೆ ಕಣ್ಣು

ಭಾರತಕ್ಕೆ ಪದಕ ಕಾಣಿಕೆ ಕೊಡುವ ಛಲದಲ್ಲಿ ನೀರಜ್ ಚೋಪ್ರಾ

​ಪ್ರಜಾವಾಣಿ ವಾರ್ತೆ
Published 29 ಜೂನ್ 2022, 14:00 IST
Last Updated 29 ಜೂನ್ 2022, 14:00 IST
ನೀರಜ್ ಚೋಪ್ರಾ 
ನೀರಜ್ ಚೋಪ್ರಾ    

ಸ್ಟಾಕ್‌ಹೋಮ್: ಒಲಿಂಪಿಕ್ ಚಿನ್ನದ ಪದಕವಿಜೇತ ಜಾವೆಲಿನ್ ಅಥ್ಲೀಟ್ ನೀರಜ್ ಚೋಪ್ರಾ ಗುರುವಾರ ಆರಂಭವಾಗಲಿರುವ ಡೈಮಂಡ್ ಲೀಗ್‌ ನಲ್ಲಿ ಭಾರತಕ್ಕೆ ಮೊಟ್ಟಮೊದಲ ಪದಕ ಗೆದ್ದುಕೊಡುವ ಭರವಸೆ ಮೂಡಿಸಿದ್ದಾರೆ.

ಈಚೆಗೆ ಪಾವೊ ನುರ್ಮಿ ಗೇಮ್ಸ್‌ನಲ್ಲಿ ಅವರು 89.30 ಮೀಟರ್ಸ್ ದೂರ ಜಾವೆಲಿನ್ ಎಸೆದು ತಮ್ಮದೇ ರಾಷ್ಟ್ರೀಯ ದಾಖಲೆಯನ್ನು ಉತ್ತಮಪಡಿಸಿಕೊಂಡಿದ್ದರು. ಇದಕ್ಕೂ ಮುನ್ನ 24 ವರ್ಷದ ನೀರಜ್ ಕಾರ್ಟೇನ್ ಗೇಮ್ಸ್‌ನಲ್ಲಿ 86.60 ಮೀಟರ್ಸ್ ದೂರ ಎಸೆದು ಜಯಿಸಿದ್ದರು.

ಈ ಎರಡೂ ಸ್ಪರ್ಧೆಗಳು ಫಿನ್ಲೆಂಡ್‌ನಲ್ಲಿ ನಡೆದಿದ್ದವು. ಕಠಿಣ ಪೈಪೋಟಿಯೂ ಇತ್ತು. ಟರ್ಕುನಲ್ಲಿ ನಡೆದಿದ್ದ ಪಾವೊ ನುರ್ಮಿ ಗೇಮ್ಸ್‌ನಲ್ಲಿ ಜಾವೆಲಿನ್ ಎಸೆತದ ನಂತರ ನೀರಜ್ ಜಾರಿ ಬಿದ್ದಿದ್ದರು. ಅದೃಷ್ಟವಶಾತ್ ಯಾವುದೇ ಗಂಭೀರ ಗಾಯಗಳಾಗಲಿಲ್ಲ. ಆದ್ದರಿಂದ ಅವರು ಪ್ರತಿಷ್ಠಿತ ಡೈಮಂಡ್ ಲೀಗ್‌ನಲ್ಲಿ ಪದಕ ಜಯಿಸುವ ನೆಚ್ಚಿನ ಅಥ್ಲೀಟ್ ಆಗಿದ್ದಾರೆ.

2018ರಲ್ಲಿ ಜೂರಿಚ್‌ನಲ್ಲಿ ನಡೆದಿದ್ದ ಡೈಮಂಡ್‌ ಲೀಗ್‌ನಲ್ಲಿ ಅವರು ನಾಲ್ಕನೇ ಸ್ಥಾನ ಪಡೆದಿದ್ದರು. ಒಟ್ಟು ಏಳು ಸಲ ಈ ಸ್ಪ್ರಧೆಯಲ್ಲಿ ಭಾಗವಹಿಸಿದ್ದಾರೆ. ಆದರೆ ಪದಕ ಜಯಸಲು ಸಾಧ್ಯವಾಗಿಲ್ಲ.

ಸ್ವೀಡನ್ ರಾಜಧಾನಿಯಲ್ಲಿ ನಡೆಯಲಿರುವ ಈ ಕೂಟದಲ್ಲಿಯೂ ಚೋಪ್ರಾಗೆ ಕಠಿಣ ಸ್ಪರ್ಧೆ ಎದುರಾಗಲಿದೆ. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಅವರಿಗೆ ಸ್ಪರ್ಧೆಯೊಡ್ಡಿದವರು ಇಲ್ಲಿದ್ದಾರೆ. ಬೆಳ್ಳಿ ಪದಕ ವಿಜೇತ ಜೆಕ್ ಗಣರಾಜ್ಯದ ಜೇಕಬ್ ವಾಡ್ಲೆಚ್, ಕಂಚು ಪದಕ ವಿಜೇತ ವಿಜೆಸ್ಲಾವ್ ವೆಸ್ಲೆ ಕಣದಲ್ಲಿದ್ಧಾರೆ. 90 ಮೀಟರ್‌ಗಿಂತ ಹೆಚ್ಚು ದೂರ ಎಸೆತದ ಸಾಮರ್ಥ್ಯವಿರುವ ಜರ್ಮನಿಯ ಜೊಹಾನಸ್ ವೆಟರ್ ಕೂಡ ಸ್ಪರ್ಧಿಸುವರು.

ಮುಂದಿನ ತಿಂಗಳು ನಡೆಯಲಿರುವ ವಿಶ್ವ ಅಥ್ಲೆಟಿಕ್ಸ್‌ ಕೂಟದ ಪೂರ್ವಭಾವಿ ಸಿದ್ಧತಾ ವೇದಿಕೆಯೂ ಆಗಿರುವ ಡೈಮಂಡ್‌ ಲೀಗ್‌ನಲ್ಲಿ ತುರುಸಿನ ಪೈಪೋಟಿ ನಡೆಯುವ ಸಾಧ್ಯತೆಗಳು ಹೆಚ್ಚಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.