ADVERTISEMENT

World Athletics Championships: ‘ಗೋಲ್ಡನ್‌ ಥ್ರೋ’ ನಿರೀಕ್ಷೆಯಲ್ಲಿ ನೀರಜ್

ಪಿಟಿಐ
Published 26 ಆಗಸ್ಟ್ 2023, 15:49 IST
Last Updated 26 ಆಗಸ್ಟ್ 2023, 15:49 IST
   

ಬುಡಾಪೆಸ್ಟ್‌: ಮೊದಲ ಯತ್ನದಲ್ಲೇ ಭರ್ಜರಿ ಥ್ರೋ ಮೂಲಕ ವಿಶ್ವ ಚಾಂಪಿಯನ್‌ಷಿಪ್‌ ಜಾವೆಲಿನ್‌ ಫೈನಲ್ ತಲುಪಿರುವ ನೀರಜ್ ಚೋಪ್ರಾ ಅತ್ಯುತ್ತಮ ಲಯದಲ್ಲಿದ್ದಾರೆ. ಅವರಿಗೆ ಸ್ಪರ್ಧೆಯೊಡ್ಡಬಹುದೆಂದು ನಿರೀಕ್ಷಿಸಲಾದವರು ಪರದಾಡಿದ್ದಾರೆ. ಹೀಗಾಗಿ ಭಾನುವಾರ ನಡೆಯುವ ಫೈನಲ್‌ನಲ್ಲಿ ಚಿನ್ನ ಗೆಲ್ಲುವ ನೆಚ್ಚಿನ ಸ್ಪರ್ಧಿಯಾಗಿದ್ದಾರೆ.

ಇದುವರೆಗೆ ದೇಶದ ಇತರ ಸ್ಪರ್ಧಿಗಳ ನಿರಾಶಾದಾಯಕ ಪ್ರದರ್ಶನದಿಂದ ಮಂಕು ಕವಿದಿದ್ದು ಭಾರತೀಯ ಪಾಳೆಯದಲ್ಲಿ ಅವರ ಸಾಧನೆ ನವೋಲ್ಲಾಸ ಮೂಡಿಸಬಹುದು. ಹೋದ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿಯ ಪದಕ ಗೆದ್ದುಕೊಂಡಿದ್ದ ನೀರಜ್, ಇಲ್ಲಿ ಜಾವೆಲಿನ್‌ಅನ್ನು 88.77 ಮೀ. ದೂರಕ್ಕೆ ಎಸೆದಿದ್ದಾರೆ– ಅದೂ ಸರಾಗವಾಗಿ. ಪ್ಯಾರಿಸ್‌ ಒಲಿಂಪಿಕ್ಸ್‌ಗೂ ಅವರಿಗೆ ಅರ್ಹತೆ ದೊರಕಿದೆ. ಇದು ಈ ಋತುವಿನಲ್ಲಿ 25 ವರ್ಷದ ನೀರಜ್ ಅವರ ಶ್ರೇಷ್ಠ ಥ್ರೊ ಹಾಗೂ ಅವರ ವೈಯಕ್ತಿಕ ನಾಲ್ಕನೇ ಉತ್ತಮ ಥ್ರೊ ಆಗಿದೆ.

ಭಾನುವಾರವೂ ಅವರು ದಾಖಲೆ ಪ್ರಯತ್ನಕ್ಕೆ ಮುನ್ನುಗ್ಗುವುದು ಖಚಿತ. ಟ್ರಯಲ್ಸ್‌ನಲ್ಲಿ ಅವರು ಎರಡನೇ ಯತ್ನಕ್ಕೆ ಹೋಗದೇ, ಯಶಸ್ವಿ ಮೊದಲ ಥ್ರೊ ಯತ್ನದ ನಂತರ ಕ್ರೀಡಾಂಗಣದಿಂದ ಹೊರನಡೆದಿದ್ದರು. ಇದರ ಉದ್ದೇಶ, ಭಾನುವಾರದ ಫೈನಲ್‌ಗೆ ಪೂರ್ಣ ಸಾಮರ್ಥ್ಯ ತೊಡಗಿಸುವುದಷ್ಟೇ.

ADVERTISEMENT

ಅವರು ಈ ಋತುವಿನಲ್ಲಿ ಕೇವಲ ಎರಡು ಕೂಟಗಳಲ್ಲಿ ಭಾಗವಹಿಸಿದ್ದರೂ, ಇಲ್ಲಿ ಮೊದಲ ಯತ್ನದಲ್ಲೇ ಜಾವೆಲಿನ್‌ಅನ್ನು ಅಷ್ಟು ದೂರಕ್ಕೆ ಎಸೆದಿರುವುದು ನೋಡಿದರೆ ಅವರು ಉತ್ತಮ ಲಹರಿಯಲ್ಲಿರುವುದನ್ನು ಸೂಚಿಸುತ್ತಿದೆ. ಅವರು ಈ ವರ್ಷ ದೋಹಾ ಮತ್ತು ಲುಸಾನ್‌ ಡೈಮಂಡ್‌ ಲೀಗ್‌ನಲ್ಲಿ ಮಾತ್ರ ಭಾಗವಹಿಸಿದ್ದು ಎರಡರಲ್ಲೂ ಚಿನ್ನ ಗೆದ್ದಿದ್ದಾರೆ.

ಹಾಲಿ ಚಾಂಪಿಯನ್‌ ಗ್ರೆನೇಡಾದ ಪೀಟರ್ಸ್‌ ಅರ್ಹತೆ ಪಡೆದಿಲ್ಲ. ಅವರು ಲಯದಲ್ಲೂ ಇರಲಿಲ್ಲ. ಮೂರು ಯತ್ನಗಳಲ್ಲಿ ಅವರಿಂದ 80 ಮೀ. ಕೂಡ ದಾಟಲಾಗಲಿಲ್ಲ.

ಟೋಕಿಯೊದಲ್ಲಿ ಅವ ಜೊತೆ ಪೈಪೋಟಿಯಲ್ಲಿ ಉಳಿದ ಅನುಭವಿಗಳೆಂದರೆ ಯಾಕೂಬ್‌ ವಡ್ಲೆಚ್‌ (ಝೆಕ್‌ ರಿಪಬ್ಲಿಕ್‌) ಮತ್ತು ಜೂಲಿಯನ್ ವೆಬರ್ (ಜರ್ಮನಿ) ಪೈಪೋಟಿ ನೀಡುವ ಸಾಧ್ಯತೆಯಿದೆ. ಆದರೆ ಡೈಮಂಡ್‌ ಲೀಗ್‌ನಲ್ಲಿ ಚೋಪ್ರಾ, ಇವರಿಬ್ಬರನ್ನೂ ಹಿಂದೆ ಹಾಕಿದ್ದಾರೆ.‌

ಆದರೆ ಈ ನಡುವೆ, ಚಾಲ್ತಿಗೆ ಬಂದಿರುವ ಪಾಕಿಸ್ತಾನದ ಅರ್ಷದ್ ನದೀಮ್ ಅವರಿಂದ ನೀರಜ್‌ಗೆ ಸ್ಪರ್ಧೆ ಎದುರಾಗಬಹುದು. ಬರ್ಮಿಂಗ್‌ಹ್ಯಾಮ್ ಕಾಮನ್ವೆಲ್ತ್‌ ಕೂಟದಲ್ಲಿ ನದೀಮ್‌ ಜಾವೆಲಿನ್ಅನ್ನು 90.18 ಮೀ. ಥ್ರೊ ಮಾಡಿ, ಪೀಟರ್ಸ್‌ ಅವರನ್ನು ಹಿಂದೆಹಾಕಿ ಚಿನ್ನ ಗೆದ್ದಿದ್ದರು. 90 ಮೀ. ತಲುಪುವ ರೇಸ್‌ನಲ್ಲಿ 26 ವರ್ಷದ ನದೀಮ್‌, ಚೋಪ್ರಾ ಅವರನ್ನು ಹಿಂದೆಹಾಕಿದ್ದಾರೆ ನಿಜ, ಆದರೆ ಇಬ್ಬರೂ ಭಾಗವಹಿಸಿದ್ದ ಸ್ಪರ್ಧೆಗಳಲ್ಲಿ ಭಾರತೀಯ ಸ್ಪರ್ಧಿಯೇ ವಿಜಯಿಯಾಗಿದ್ದಾರೆ.

ಚೋಪ್ರಾ, 2018ರ ಜಕಾರ್ತಾ ಏಷ್ಯನ್‌ ಗೇಮ್ಸ್‌ನಲ್ಲಿ ಚಿನ್ನ ಗೆದ್ದಾಗ, ನದೀಮ್‌ ಕಂಚಿನ ಪದಕ ಪಡೆದಿದ್ದರು. 2018ರ ಕಾಮನ್ವೆಲ್ತ್ ಕ್ರೀಡೆಗಳಲ್ಲಿ ಚೋಪ್ರಾ ವಿಜಯಿಯಾದರೆ, ನದೀಮ್ ಎಂಟನೇ ಸ್ಥಾನ ಗಳಿಸಿದ್ದರು. ಟೋಕಿಯೊ ಒಲಿಂಪಿಕ್ಸ್‌ (2021)ನಲ್ಲಿ ಚೋಪ್ರಾ ಚಾಂಪಿಯನ್ ಆದರೆ, ಪಾಕ್‌ ಸ್ಪರ್ಧಿ ಏಳನೇಯವರಾಗಿದ್ದರು. ಹೀಗೆ ಇತಿಹಾಸ, ಫಾರ್ಮ್ ನೀರಜ್ ಕಡೆಯಿದೆ. ಆದರೆ ನದೀಮ್ ಅವರನ್ನು ನಿರ್ಲಕ್ಷಿಸುವಂತಿಲ್ಲ.

ಭಾರತದ ಡಿ.ಪಿ.ಮನು (81.31 ಮೀ.) ಮತ್ತು ಕಿಶೋರ್‌ ಜೇನಾ (80.55 ಮೀ.) ಅವರೂ ಫೈನಲ್‌ಗೇರಿದ್ದಾರೆ. ಹೀಗಾಗಿ ಭಾರತದ ಮೂವರು 12 ಮಂದಿಯ ಅಂತಿಮ ಕಣದಲ್ಲಿದ್ದಾರೆ. ಒಂದೇ ಸ್ಪರ್ಧೆಯಲ್ಲಿ ಈ ರೀತಿ ಮೂವರು ಫೈನಲ್‌ಗೇರಿರುವುದು ಇದೇ ಮೊದಲು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.