ADVERTISEMENT

Tokyo Olympics ಜಾವೆಲಿನ್‌ ಥ್ರೋ: ಒಂದೇ ಎಸೆತದಲ್ಲಿ ಫೈನಲ್‌ ಪ್ರವೇಶಿಸಿದ ನೀರಜ್‌

ಪಿಟಿಐ
Published 4 ಆಗಸ್ಟ್ 2021, 3:21 IST
Last Updated 4 ಆಗಸ್ಟ್ 2021, 3:21 IST
ನೀರಜ್ ಚೋಪ್ರಾ
ನೀರಜ್ ಚೋಪ್ರಾ   

ಟೋಕಿಯೊ: ಭಾರತದ ಜಾವೆಲಿನ್‌ ಥ್ರೋ ಪಟು ನೀರಜ್‌ ಚೋಪ್ರಾ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪದಕದ ಭರವಸೆಯನ್ನು ಜೀವಂತವಾಗಿರಿಸಿದ್ದಾರೆ. ಬುಧವಾರ ನಡೆದ ಪುರುಷರ ಜಾವೆಲಿನ್‌ ಥ್ರೋ ಅರ್ಹತಾ ಸುತ್ತಿನಿಂದ ನೀರಜ್‌ ನೇರವಾಗಿ ಫೈನಲ್‌ಗೆ ಪ್ರವೇಶ ಪಡೆದಿದ್ದಾರೆ.

ಮೊದಲ ಬಾರಿಗೆ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿರುವ ನೀರಜ್‌, ಇಂದು 'ಎ ಗುಂಪಿನ' ಅರ್ಹತಾ ಸುತ್ತಿನ ಮೊದಲ ಪ್ರಯತ್ನದಲ್ಲಿಯೇ 86.5 ಮೀಟರ್‌ ದೂರಕ್ಕೆ ಜಾವೆಲಿನ್‌ ಎಸೆಯುವ ಮೂಲಕ ಅಚ್ಚರಿಯ ಸಾಧನೆ ಮಾಡಿದರು. ಮುಂದಿನ ಹಂತಕ್ಕೆ ಅರ್ಹತೆ ಪಡೆಯಲು 83.50 ಮೀಟರ್‌ ದೂರವನ್ನು ಜಾವೆಲಿನ್‌ ಮುಟ್ಟಬೇಕಿತ್ತು. ಶನಿವಾರ ಅಂತಿಮ ಸುತ್ತಿನ ಸ್ಪರ್ಧೆಯು ನಡೆಯಲಿದೆ.

ಹರಿಯಾಣದ ಪಾಣಿಪತ್‌ ಸಮೀಪದ ಖಾಂದ್ರ ಗ್ರಾಮದ ರೈತರ ಮಗ ನೀರಜ್‌ ಚೋಪ್ರಾ. 23 ವರ್ಷ ವಯೋಮಾನದ ನೀರಜ್‌ ಭಾರತಕ್ಕೆ ಚಿನ್ನದ ಗರಿ ತೊಡಿಸುವ ಭರವಸೆಯಾಗಿ ಕಾಣುತ್ತಿದ್ದಾರೆ.

ADVERTISEMENT
ಜಾವೆಲಿನ್‌ ಥ್ರೋ ಅರ್ಹತಾ ಸುತ್ತಿನ ಮೊದಲ ಎಸೆತದಲ್ಲಿ ನೀರಜ್‌ ಚೋಪ್ರಾ

ಭಾರತದ ಮತ್ತೊಬ್ಬ ಪಟು ಶಿವಪಾಲ್‌ ಸಿಂಗ್‌, ಚಾವೆಲಿನ್‌ ಥ್ರೋ 'ಬಿ ಗುಂಪಿನ' ಅರ್ಹತಾ ಸುತ್ತಿನಲ್ಲಿ ಮುಂದಿನ ಅರ್ಹತೆ ಗಿಟ್ಟಿಸಲು ವಿಫಲರಾದರು.

ಜರ್ಮನಿಯ ಜೊಹಾನಿಸ್‌ ವೇಟರ್‌ (28) ಫೈನಲ್‌ನಲ್ಲಿ ನೀರಜ್‌ಗೆ ಪ್ರಬಲ ಪೈಪೋಟಿ ನೀಡುವ ಸಾಧ್ಯತೆ ಇದೆ. ಅರ್ಹತಾ ಸುತ್ತಿನಲ್ಲಿ ವೇಟರ್‌ ಮೂರನೇ ಪ್ರಯತ್ನದಲ್ಲಿ 85.64 ಮೀಟರ್ ದೂರಕ್ಕೆ ಎಸೆಯುವ ಮೂಲಕ ಫೈನಲ್‌ಗೆ ಪ್ರವೇಶಿಸಿದ್ದಾರೆ. ಫಿನ್‌ಲ್ಯಾಂಡ್‌ನ ಲಸ್ಸಿ ಎಲೆಲ್ಯಾಟಲೊ 84.50 ಮೀಟರ್‌ ದೂರಕ್ಕೆ ಎಸೆಯುವ ಮೂಲಕ ಫೈನಲ್‌ಗೆ ಅರ್ಹತೆ ಗಿಟ್ಟಿಸಿದರು.

ಶನಿವಾರ ನಡೆಯುವ ಫೈನಲ್‌ನಲ್ಲಿ 12 ಜಾವೆಲಿನ್‌ ಪಟುಗಳ ನಡುವೆ ದೂರದ ಗುರಿಯ ಪೈಪೋಟಿ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.