ADVERTISEMENT

ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಸಿದ್ಧತೆ: ನೀರಜ್‌ ಚೋಪ್ರಾಗೆ ಸತ್ವ‍ಪರೀಕ್ಷೆ

ಪಾವೊ ನೂರ್ಮಿ ಅಥ್ಲೆಟಿಕ್ ಕೂಟ ಇಂದು

ಪಿಟಿಐ
Published 18 ಜೂನ್ 2024, 1:00 IST
Last Updated 18 ಜೂನ್ 2024, 1:00 IST
ನೀರಜ್‌ ಚೋಪ್ರಾ
ನೀರಜ್‌ ಚೋಪ್ರಾ   

ತುರ್ಕು (ಫಿನ್ಲೆಂಡ್‌): ತೊಡೆಯ ಸ್ನಾಯುನೋವಿನಿಂದ ಅಲ್ಪಾವಧಿ ವಿರಾಮ ಪಡೆದಿದ್ದ ಜಾವೆಲಿನ್ ತಾರೆ ನೀರಜ್ ಚೋಪ್ರಾ, ಹೊಸ ಉತ್ಸಾಹದೊಡನೆ ಮಂಗಳವಾರ ಪಾವೊ ನೂರ್ಮಿ ಅಥ್ಲೆಟಿಕ್‌ ಕೂಟದಲ್ಲಿ ಭಾಗವಹಿಸಲಿದ್ದಾರೆ. ಆದರೆ ಒಲಿಂಪಿಕ್ಸ್‌ ಸಿದ್ಧತೆಗೆ ನೆರವಾಗಲಿರುವ ಈ ಕೂಟದಲ್ಲಿ ಹಾಲಿ ಒಲಿಂಪಿಕ್‌ ಚಾಂಪಿಯನ್‌ಗೆ ಪ್ರಬಲ ಪೈಪೋಟಿ ಎದುರಾಗುವ ಸಂಭವವಿದೆ.

26 ವರ್ಷದ ನೀರಜ್ ಕಣದಲ್ಲಿರುವ ಏಕೈಕ ಭಾರತೀಯ ಅಥ್ಲೀಟ್‌. ಅವರಿಗೆ ಜರ್ಮನಿಯ ಯುವತಾರೆ ಮ್ಯಾಕ್ಸ್‌ ಡ್ಹೆನಿಂಗ್ ಅವರಿಂದ ಪೈಪೋಟಿ ಎದುರಾಗುವ ನಿರೀಕ್ಷೆಯಿದೆ. ಜಾವೆಲಿನ್‌ ಎಸೆತದಲ್ಲಿ 90 ಮೀ. ದೂರ ಥ್ರೊ ಮಾಡಿರುವ ಸಾಧಕರ ಕ್ಲಬ್‌ಗೆ ಸೇರ್ಪಡೆಗೊಂಡ ಅತಿ ಕಿರಿಯ ಜಾವೆಲಿನ್ ಪಟು ಎಂಬ ಹಿರಿಮೆಗೆ ಉದಯೋನ್ಮುಖ ತಾರೆ 19 ವರ್ಷದ ಡ್ಹೆನಿಂಗ್‌ ಪಾತ್ರರಾಗಿದ್ದಾರೆ.

ನೀರಜ್‌ ಇನ್ನೂ 90 ಮೀ. ಕ್ಲಬ್‌ಗೆ ಸೇರ್ಪಡೆಯಾಗಿಲ್ಲ. 2022ರ ಕೂಟದಲ್ಲಿ ಅವರು ಭಲ್ಲೆಯನ್ನು 89.30 ಮೀ. ದೂರ ಎಸೆದು ಬೆಳ್ಳಿ ಗೆದ್ದಿದ್ದರು. ಅದೇ ವರ್ಷದ ಡೈಮಂಡ್‌ ಲೀಗ್‌ನಲ್ಲಿ ಅವರ ವೈಯಕ್ತಿಕ ಶ್ರೇಷ್ಠ ಪ್ರದರ್ಶನವಾದ 89.94 ಮೀ. ದಾಖಲಾಗಿತ್ತು.

ADVERTISEMENT

ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ನೀರಜ್‌ ಅವರಿಗೆ ಚಿನ್ನದ ಪದಕ ಉಳಿಸಿಕೊಳ್ಳುವ ಹಾದಿಯಲ್ಲಿ ಉದಯೋನ್ಮುಖ ಥ್ರೋವರ್‌ ಡ್ಹೆನಿಂಗ್ ಅವರಿಂದ ಹೆಚ್ಚಿನ ಪೈಪೋಟಿ ಎದುರಾಗಬಹುದು ಎಂಬ ಮಾತುಗಳು ಕೇಳಿಬರುತ್ತಿವೆ.

2022ರಲ್ಲಿ ಇದೇ (ಪಾವೊ ನೂರ್ಮಿ) ಕೂಟದಲ್ಲಿ ನೀರಜ್ ಅವರನ್ನು ಸೋಲಿಸಿದ್ದ ಸ್ಥಳೀಯ ಸ್ಪರ್ಧಿ ಒಲಿವರ್‌ ಹೆಲಾಂಡರ್ ಅವರೂ ಕಣದಲ್ಲಿದ್ದಾರೆ.

ಎರಡು ಬಾರಿಯ ವಿಶ್ವ ಚಾಂಪಿಯನ್ ಆ್ಯಂಡರ್ಸನ್ ಪೀಟರ್ಸ್‌ (ಗ್ರೆನೆಡಾ) ಮತ್ತು 2012ರ ಒಲಿಂಪಿಕ್ ಚಾಂಪಿಯನ್ ಕೆಶೋರ್ನ್ ವಾಲ್ಕಾಟ್‌  (ಟ್ರಿನಿಡಾಡ್‌ ಮತ್ತು ಟೊಬಾಗೊ) ಅವರೂ ಸ್ಪರ್ಧಾಕಣದಲ್ಲಿದ್ದಾರೆ. ಗೈರುಹಾಜರಾಗಿರುವ ಪ್ರಮುಖ ಸ್ಪರ್ಧಿ ಎಂದರೆ ಯಾಕುಬ್‌ ವಾಡ್ಲೆಚ್‌. ಝೆಕ್‌ ರಿಪಬ್ಲಿಕ್‌ನ ಈ ಅನುಭವಿ ಅಥ್ಲೀಟ್‌ ದೋಹಾ ಡೈಮಂಡ್‌ ಲೀಗ್‌ನಲ್ಲಿ ನೀರಜ್ ಅವರನ್ನು ಸೋಲಿಸಿ ಚಿನ್ನ ಗೆದ್ದಿದ್ದರು.

ತೊಡೆಯ ಸ್ನಾಯುಗುಚ್ಛದ ನೋವು ಬಾಧಿಸದಂತೆ ಮುನ್ನೆಚ್ಚರಿಕೆಯ ಕ್ರಮವಾಗಿ ಚೋಪ್ರಾ ಅವರು ಕಳೆದ ತಿಂಗಳು ಒಸ್ಟ್ರಾವಾ ಗೋಲ್ಡನ್‌ ಸ್ಪೈಕ್ ಟೂರ್ನಿಯಿಂದ ಹಿಂದೆಸರಿದಿದ್ದರು.

‌ಚೋಪ್ರಾ, ಕಳೆದ ತಿಂಗಳು ಭುವನೇಶ್ವರದಲ್ಲಿ ನಡೆದ ಫೆಡರೇಷನ್ ಕಪ್ ರಾಷ್ಟ್ರೀಯ ಸೀನಿಯರ್ ಅಥ್ಲೆಟಿಕ್ ಕೂಟಕ್ಕೆ ಪುನರಾಮನ ಮಾಡಿ ಚಿನ್ನಗೆದ್ದಿದ್ದರು. ಆದರೆ ಅಲ್ಲಿ ಅಷ್ಟೇನೂ (82.77 ಮೀ.) ಗಮನ ಸೆಳೆದಿರಲಿಲ್ಲ.

ಪಾವೊ ನೂರ್ಮಿ ಕ್ರೀಡೆಗಳ ನಂತರ ಅವರು ಜುಲೈ 7ರಂದು ಪ್ಯಾರಿಸ್‌ ಡೈಮಂಡ್‌ ಲೀಗ್‌ನಲ್ಲಿ ಕಣಕ್ಕಿಳಿಯಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.