ADVERTISEMENT

ಡೈಮಂಡ್ ಲೀಗ್ ಟ್ರೋಫಿ ಗೆದ್ದ ಚಿನ್ನದ ಹುಡುಗ ನೀರಜ್ ಚೋಪ್ರಾ

ಒಲಿಪಿಂಕ್ಸ್‌ನಲ್ಲಿ ಚಿನ್ನ ಗೆದ್ದಿದ್ದ ನೀರಜ್ ಚೋಪ್ರಾ

ಪಿಟಿಐ
Published 9 ಸೆಪ್ಟೆಂಬರ್ 2022, 14:02 IST
Last Updated 9 ಸೆಪ್ಟೆಂಬರ್ 2022, 14:02 IST
ನೀರಜ್ ಚೋಪ್ರಾ
ನೀರಜ್ ಚೋಪ್ರಾ   

ಜೂರಿಕ್‌, ಸ್ವಿಟ್ಜರ್‌ಲೆಂಡ್‌: ವಿಶ್ವದ ಘಟಾನುಘಟಿ ಅಥ್ಲೀಟ್‌ಗಳ ಹೋರಾಟಕ್ಕೆ ವೇದಿಕೆಯೊದಗಿಸುವ ಡೈಮಂಡ್‌ ಲೀಗ್ ಫೈನಲ್ಸ್‌ನಲ್ಲಿ ಗೆದ್ದ ಭಾರತದ ಜಾವೆಲಿನ್‌ ಥ್ರೋ ಸ್ಪರ್ಧಿ ನೀರಜ್‌ ಚೋಪ್ರಾ, ಮತ್ತೊಂದು ಚಾರಿತ್ರಿಕ ಸಾಧನೆಗೆ ಭಾಜನರಾದರು.

ಸ್ವಿಟ್ಜರ್‌ಲೆಂಡ್‌ನ ಜೂರಿಕ್‌ನಲ್ಲಿ ಗುರುವಾರ ನಡೆದ ಜಿದ್ದಾಜಿದ್ದಿನ ಸ್ಪರ್ಧೆಯಲ್ಲಿ ‘ಚಿನ್ನದ ಹುಡುಗ’ ನೀರಜ್, 88.44 ಮೀ. ದೂರ ಎಸೆದು ಚಾಂಪಿಯನ್‌ಪಟ್ಟ ತಮ್ಮದಾಗಿಸಿಕೊಂಡರು. ಭಾರತದ ಅಥ್ಲೀಟ್‌ವೊಬ್ಬರು ಡೈಮಂಡ್‌ ಲೀಗ್‌ ಫೈನಲ್ಸ್‌ನಲ್ಲಿ ಗೆದ್ದದ್ದು ಇದೇ ಮೊದಲು.

24 ವರ್ಷದ ನೀರಜ್‌ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದಿದ್ದರಲ್ಲದೆ, ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಜಯಿಸಿದ್ದರು. ಇದೀಗ ಡೈಮಂಡ್‌ ಲೀಗ್‌ನಲ್ಲಿ ಚಾಂಪಿಯನ್‌ ಆಗಿದ್ದಾರೆ. 13 ತಿಂಗಳ ಅಂತರದಲ್ಲಿ ಅವರಿಂದ ಈ ಎಲ್ಲ ಸಾಧನೆ ಮೂಡಿಬಂದಿದೆ.

ನೀರಜ್‌ ಅವರ ಮೊದಲ ಥ್ರೋ ಫೌಲ್‌ ಆಯಿತು. ಎರಡನೇ ಪ್ರಯತ್ನದಲ್ಲಿ 88.44 ಮೀ. ದೂರ ಎಸೆದರು. ಈ ಸಾಧನೆ ಅಗ್ರಸ್ಥಾನ ತಂದುಕೊಟ್ಟಿತು. ಅವರ ವೃತ್ತಿಜೀವನದ ನಾಲ್ಕನೇ ಅತ್ಯುತ್ತಮ ಪ್ರದರ್ಶನ ಇದಾಗಿದೆ. ಬಳಿಕದ ನಾಲ್ಕು ಪ್ರಯತ್ನಗಳಲ್ಲಿ 88 ಮೀ., 86.11 ಮೀ., 87 ಮೀ., ಮತ್ತು 83.60 ಮೀ. ದೂರವನ್ನು ಕಂಡುಕೊಂಡರು.

ಒಲಿಂಪಿಕ್‌ ಬೆಳ್ಳಿ ಪದಕ ವಿಜೇತ ಜೆಕ್‌ ರಿಪಬ್ಲಿಕ್‌ನ ಯಾಕುಬ್‌ ವಾದ್ಲೇಖ್ 86.94 ಮೀ. ಸಾಧನೆಯೊಂದಿಗೆ ಎರಡನೇ ಸ್ಥಾನ ಪಡೆದರೆ, ಜರ್ಮನಿಯ ಜೂಲಿಯನ್‌ ವೆಬರ್‌ (83.73 ಮೀ.) ಮೂರನೆಯವರಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.