ಟೋಕಿಯೊ: ಒಲಿಂಪಿಕ್ಸ್ ಜಾವೆಲಿನ್ ಥ್ರೋದಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ನೀರಜ್ ಚೋಪ್ರಾ, ಭಾರತ ಕಂಡ ಮಹಾನ್ ಅಥ್ಲೀಟ್ ಮಿಲ್ಖಾ ಸಿಂಗ್ ಅವರ ಕೊನೆಯ ಆಸೆಯನ್ನು ಈಡೇರಿಸಿದ್ದಾರೆ.
ಅಷ್ಟೇ ಯಾಕೆ ತಮ್ಮ ಐತಿಹಾಸಿಕ ಸಾಧನೆಯನ್ನು ದಿಗ್ಗಜ ಮಿಲ್ಖಾ ಸಿಂಗ್ ಅವರಿಗೆ ಅರ್ಪಿಸಿದ್ದಾರೆ.
ಒಲಿಂಪಿಕ್ಸ್ ಅಥ್ಲೆಟಿಕ್ಸ್‌ನಲ್ಲಿ ಭಾರತದ ಸ್ಪರ್ಧಿಯೊಬ್ಬರು ಚಿನ್ನದ ಪದಕ ಗೆಲ್ಲುವುದು ಮಿಲ್ಖಾ ಸಿಂಗ್ ಅಭಿಲಾಷೆಯಾಗಿತ್ತು. ಆದರೆ ಸಾಯುವವರೆಗೂ ಆ ಆಸೆ ಈಡೇರಲಿಲ್ಲ.
'ಮಿಲ್ಖಾ ಸಿಂಗ್ ಒಲಿಂಪಿಕ್ ಅಂಗಣದಲ್ಲಿ ರಾಷ್ಟ್ರಗೀತೆ ಕೇಳಲು ಬಯಸಿದ್ದರು. ಆದರೆ ಅವರು ನಮ್ಮೊಂದಿಗಿಲ್ಲ. ಅವರ ಕನಸು ಈಡೇರಿದೆ' ಎಂದು 23 ವರ್ಷದ ನೀರಜ್ ಚೋಪ್ರಾ ಹೇಳಿದ್ದಾರೆ.
ಇದಕ್ಕೆ ಸಂಬಂಧಿಸಿದಂತೆ ಮಿಲ್ಖಾ ಸಿಂಗ್ ಸಂದರ್ಶನದ ವಿಡಿಯೊ ಈಗ ವೈರಲ್ ಆಗಿದೆ. 'ಭಾರತದ ಅಥ್ಲೀಟ್ ಒಲಿಂಪಿಕ್‌ನಲ್ಲಿ ಚಿನ್ನದ ಪದಕ ಗೆದ್ದು ದೇಶದ ಕೀರ್ತಿ ಪತಾಕೆಯನ್ನು ಹಾರಿಸಿ ರಾಷ್ಟ್ರಗೀತೆ ಮೊಳಗಿಸಬೇಕು. ಇದರಿಂದ ನನಗೆ ಖುಷಿಯಾಗಲಿದೆ' ಎಂದು ತಮ್ಮ ಕೊನೆಯ ಆಸೆಬಗ್ಗೆ ಹೇಳಿದ್ದರು. ಆ ಕನಸು ಟೋಕಿಯೊ ಒಲಿಂಪಿಕ್ಸ್‌ನಲ್ಲಿ ನನಸಾಗಿದೆ.
1960ರ ರೋಮ್ ಒಲಿಂಪಿಕ್ಸ್‌ನಲ್ಲಿ ಫೈನಲ್ ತಲುಪಿದ ಮಿಲ್ಖಾ ಸಿಂಗ್ ಅವರಿಗೆ ಕೂದಲೆಳೆಯ ಅಂತರದಲ್ಲಿ ಪದಕ ಕೈತಪ್ಪಿತ್ತು. ಸ್ವಾತಂತ್ರ್ಯಾ ನಂತರದ ಭಾರತದಲ್ಲಿ ಅಥ್ಲೆಟಿಕ್ಸ್‌ನಲ್ಲಿ ಮಿಲ್ಕಾ ಸಿಂಗ್ ಸಾಧನೆಗಳೇ ದೇಶದ ಕ್ರೀಡಾಪಟುಗಳಿಗೆ ಸ್ಫೂರ್ತಿಯಾಗಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.