ನವದೆಹಲಿ (ಪಿಟಿಐ): ಜಾವೆಲಿನ್ ಥ್ರೋ ಅಥ್ಲೀಟ್ ನೀರಜ್ ಚೋಪ್ರಾ ಅವರನ್ನು ಕಾಡುತ್ತಿದ್ದ ತೊಡೆ ಸಂಧುವಿನ ನೋವು ಈಗ ಇಲ್ಲ. ಅವರು ಚೆನ್ನಾಗಿದ್ದು, ಪ್ಯಾರಿಸ್ ಒಲಿಂಪಿಕ್ಸ್‌ಗಾಗಿ ಅಂತಿಮ ಹಂತದ ತರಬೇತಿಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ ಎಂದು ಅವರ ತರಬೇತುದಾರ, ಜರ್ಮನಿಯ ಕ್ಲಾಸ್ ಬಾರ್ಟೊನೀಜ್ ಹೇಳಿದ್ದಾರೆ.
ನೀರಜ್ ಅವರು ಟೋಕಿಯೊ ಒಲಿಂಪಿಕ್ಸ್‌ನಲ್ಲಿ (2020) ಜಾವೆಲಿನ್ ಥ್ರೋನಲ್ಲಿ ಚಿನ್ನ ಗೆದ್ದು ಇತಿಹಾಸ ನಿರ್ಮಿಸಿದ್ದರು. ಇದೇ 26ರಿಂದ ಶುರುವಾಗಲಿರುವ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿಯೂ ಅವರು ಚಿನ್ನದ ಪದಕ ಗೆಲ್ಲುವ ನೆಚ್ಚಿನ ಅಥ್ಲೀಟ್ ಆಗಿದ್ದಾರೆ. ಆದರೆ ಈಚೆಗೆ ಅವರಿಗೆ ತೊಡೆಯ ಗಾಯ ಕಾಡಿತ್ತು. ಆದ್ದರಿಂದ ಅವರ ಸಾಮರ್ಥ್ಯದ ಕುರಿತ ಆತಂಕವೂ ಎದುರಾಗಿತ್ತು. ಇದೀಗ ಕ್ಲಾಸ್ ಅವರು ‘ಯಾವುದೇ ತೊಂದರೆ ಇಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.
‘ನಾವು ಯೋಜಿಸಿದಂತೆಯೇ ಎಲ್ಲವೂ ನಡೆದಿದೆ. ಈ ಕ್ಷಣದಲ್ಲಿಯೂ ಅವರಿಗೆ ತೊಂದರೆ (ತೊಡೆ ಸಂಧುವಿನ ಲಘು ನೋವು) ಇಲ್ಲ. ಒಲಿಂಪಿಕ್ಸ್ ಮುಗಿಯುವವರೆಗೂ ಇದೇ ಸ್ಥಿತಿ ಮುಂದುವರೆಯುವ ಭರವಸೆ ಇದೆ‘ ಎಂದು ಕ್ಲಾಸ್ ಹೇಳಿದ್ದಾರೆ.
ಹೋದ ಮೇ 28ರಂದು ಒಸ್ತಾವಾ ಗೋಲ್ಡನ್ ಸ್ಪೈಕ್ ಅಥ್ಲೆಟಿಕ್ಸ್‌ನಿಂದ ನೀರಜ್ ಹಿಂದೆ ಸರಿದಿದ್ದರು. ತೊಡೆ ಸಂಧುವಿನ ಸ್ನಾಯುವಿನಲ್ಲಿ ಸಣ್ಣಪ್ರಮಾಣದ ಸೆಳೆತವಿದ್ದ ಕಾರಣ ಅವರು ಈ ನಿರ್ಧಾರ ಕೈಗೊಂಡಿದ್ದರು. ಅದಾದ ನಂತರ ಅವರು ಜೂನ್ 18ರಂದು ಫಿನ್ಲೆಂಡ್‌ನಲ್ಲಿ ನಡೆದ ಪಾವೊ ನುರ್ಮಿ ಗೇಮ್ಸ್‌ನಲ್ಲಿ ಸ್ಪರ್ಧಿಸಿ, ಚಿನ್ನ ಜಯಿಸಿದ್ದರು. ಆದರೆ ಜುಲೈ 7ರಂದು ನಡೆದ ಪ್ಯಾರಿಸ್ ಡೈಮಂಡ್ ಲೀಗ್‌ನಿಂದ ಹೊರಗುಳಿದರು. ಈ ವರ್ಷದ ಕ್ಯಾಲೆಂಡರ್‌ನಲ್ಲಿ ಪೂರ್ವನಿಗದಿತ ಸ್ಪರ್ಧೆ ಇದಾಗಿರಲಿಲ್ಲ.
ಒಲಿಂಪಿಕ್ ಕೂಟದಲ್ಲಿ ಚೋಪ್ರಾ ಅವರ ಸ್ಪರ್ಧೆಯು ಆಗಸ್ಟ್ 6ರಂದು ನಡೆಯಲಿದೆ.
‘ಸ್ಪ್ರಿಂಟಿಂಗ್, ಜಂಪಿಂಗ್ ಮತ್ತು ಥ್ರೋಯಿಂಗ್ ವಿಭಾಗಗಳಲ್ಲಿ ತರಬೇತಿ ನೀಡಲಾಗುತ್ತಿದೆ. ಬೆಳಿಗ್ಗೆಯ ಅವಧಿಯಲ್ಲಿ ಥ್ರೋಯಿಂಗ್ ಅಥವಾ ವೇಟ್‌ಲಿಫ್ಟಿಂಗ್ ತಾಲೀಮು ನಡೆಸಲಾಗುತ್ತದೆ. ಸಂಜೆಯೂ ಒಂದು ಅವಧಿಯಲ್ಲಿ ತರಬೇತಿ ನಡೆಸಲಾಗುತ್ತದೆ. ಪ್ರತಿ ಅವಧಿಯೂ ಎರಡರಿಂದ ಎರಡೂವರೆ ಗಂಟೆಯದ್ದಾಗಿರುತ್ತದೆ’ ಎಂದು ಕ್ಲಾಸ್ ವಿವರಿಸಿದರು.
‘ಈ ಕ್ರೀಡೆಯಲ್ಲಿ ನಿಧಾನವಾಗಿ ಓಡಿಹೋಗಿ ಜಾವೆಲಿನ್ ಅನ್ನು ದೂರದವರೆಗೆ ಎಸೆಯುವುದು ಸಾಧ್ಯವಿಲ್ಲ. ಆದ್ದರಿಂದ ವೇಗದ ಓಟವೊಂದೇ ಪರಿಹಾರ. ಅದಕ್ಕಾಗಿ ತೊಡೆಯಲ್ಲಿ ಅಪಾರ ಸಾಮರ್ಥ್ಯ ಇರಬೇಕು. ಆದ್ದರಿಂದ ಅವರ ಗಾಯ ಶಮನವಾಗಿರುವುದು ಒಳ್ಳೆಯ ಲಕ್ಷಣ‘ ಎಂದೂ ಅವರು ಹೇಳಿದರು.
ಕ್ಲಾಸ್ ಅವರು ಬಯೋ ಮೆಕ್ಯಾನಿಕ್ಸ್ ಪರಿಣತರೂ ಆಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.