ನವದೆಹಲಿ: ಇಂಡಿಯಾ ಓಪನ್ ಚಿನ್ನ ವಿಜೇತ ನೀರಜ್ ಅವರು 2016ರ ವಿಶ್ವ ಚಾಂಪಿಯನ್ ಬಾಕ್ಸರ್ ಅಲೆಸಿಯಾ ಮೆಸಿಯಾನೊ ಅವರಿಗೆ ಸೋಲಿನ ಪಂಚ್ ನೀಡಿದ್ದಾರೆ. ರಷ್ಯಾದ ಕಾಸ್ಪಿಸ್ಕಿಯಲ್ಲಿ ನಡೆಯುತ್ತಿರುವ ಮಗೋಮ್ ಸಲಾಂ ಉಮಖನೊವ್ ಸ್ಮಾರಕ ಬಾಕ್ಸಿಂಗ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಶುಕ್ರವಾರ ಅವರು ಫೈನಲ್ ತಲುಪಿದರು.
ಮಹಿಳೆಯರ 57 ಕೆಜಿ ವಿಭಾಗದಲ್ಲಿ ಅವರು ಇಟಲಿಯ ಮೆಸಿಯಾನೊ ಅವರಿಗೆ 3–2ರಿಂದ ಆಘಾತ ನೀಡಿದರು. ಪಂದ್ಯದುದ್ದಕ್ಕೂ ಜಿದ್ದಾಜಿದ್ದಿನ ಪೈಪೋಟಿ ಕಂಡುಬಂತು. ಆದರೆ ಅಂತಿಮ ಸುತ್ತಿನಲ್ಲಿ ಕೆಲವು ನಿಖರ ಪಂಚ್‌ಗಳ ಮೂಲಕ ಗಮಸೆಳೆದ ಭಾರತದ ಬಾಕ್ಸರ್‌ಗೆ ಗೆಲುವು ಒಲಿಯಿತು.
ಪುರುಷರ ವಿಭಾಗದಲ್ಲಿ ಗೌರವ್ ಸೋಲಂಕಿ ಮತ್ತು ಗೋವಿಂದ್ ಸಹಾನಿ ಅವರು ಗುರುವಾರ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ.
ಕಾಮನ್ವೆಲ್ತ್ ಗೇಮ್ಸ್ ಚಿನ್ನ ವಿಜೇತ ಗೌರವ್ ಅವರು 56 ಕೆಜಿ ವಿಭಾಗದಲ್ಲಿ ಸ್ಥಳೀಯ ಬಾಕ್ಸರ್ ಮ್ಯಾಕ್ಸಿಂ ಚೆರ್ನಿಶೆವ್ ವಿರುದ್ಧ 3–2ರಿಂದ ಗೆಲುವಿನ ನಗೆ ಬೀರಿದರು. ಆರಂಭದಲ್ಲಿ ತಾಳ್ಮೆಯ ಆಟಕ್ಕೆ ಮನೆಮಾಡಿದ್ದ ಭಾರತದ ಬಾಕ್ಸರ್, ಆ ಬಳಿಕ ಬಲಶಾಲಿ ಪಂಚ್‌ಗಳ ಮೂಲಕ ಎದುರಾಳಿಯನ್ನು ಕಂಗೆಡಿಸಿದರು.
49 ಕೆಜಿ ವಿಭಾಗದಲ್ಲಿ ಗೋವಿಂದ್ ಅವರು ತಜಿಕಿಸ್ತಾನದ ಶೆರ್ಮುಖ್ ಅಹ್ಮದ್ ರುಸ್ತಮೊವ್ ವಿರುದ್ಧ ಆರ್‌ಎಸ್‌ಸಿ ನಿಯಮದ ಮೂಲಕ ಮೂಲಕ ಜಯ ಸಾಧಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.