ADVERTISEMENT

ನೆಟ್‍ಬಾಲ್ ಚಾಂಪಿಯನ್‍ಷಿಪ್‌: ಮಂಗಳೂರು ವಿ.ವಿ ತಂಡಕ್ಕೆ ಪ್ರಶಸ್ತಿ

Sarikashree KC
Published 16 ಮಾರ್ಚ್ 2024, 0:21 IST
Last Updated 16 ಮಾರ್ಚ್ 2024, 0:21 IST
   

ತುಮಕೂರು: ಮಂಗಳೂರು ವಿಶ್ವವಿದ್ಯಾಲಯ ತಂಡವು ಇಲ್ಲಿನ ಸಾಹೇ ವಿಶ್ವವಿದ್ಯಾಲಯದ ವತಿಯಿಂದ ನಗರದ ಸಿದ್ಧಾರ್ಥ ವೈದ್ಯಕೀಯ ಕಾಲೇಜಿನ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಅಖಿಲ ಭಾರತ ಪುರುಷರ ನೆಟ್‍ಬಾಲ್ ಚಾಂಪಿಯನ್‍ಷಿಪ್‌ನಲ್ಲಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.

ಶುಕ್ರವಾರ ನಡೆದ ಫೈನಲ್‌ ಪಂದ್ಯದಲ್ಲಿ ಮಂಗಳೂರು ತಂಡವು 30–27 ಅಂತರದಿಂದ ಹಾಲಿ ಚಾಂಪಿಯನ್‌ ಬೆಂಗಳೂರು ವಿಶ್ವವಿದ್ಯಾಲಯ ತಂಡವನ್ನು ಮಣಿಸಿತು.

ಸೂಪರ್ ಲೀಗ್‌ ಹಂತದ ಪಂದ್ಯಗಳಲ್ಲಿ ಬೆಂಗಳೂರು ವಿ.ವಿಯು 32–27ರಿಂದ ಮಹಾರಾಷ್ಟ್ರದ ಸಾವಿತ್ರಿಬಾಯಿ ಫುಲೆ ವಿ.ವಿ ತಂಡದ ವಿರುದ್ಧ ಗೆಲುವು ಸಾಧಿಸಿತು.

ADVERTISEMENT

ಮತ್ತೊಂದು ಪಂದ್ಯದಲ್ಲಿ ಮಂಗಳೂರು ತಂಡವು 42–32ರಿಂದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ವಿರುದ್ಧ ಜಯ ಗಳಿಸಿತು. ಸಾವಿತ್ರಿಬಾಯಿ ಫುಲೆ ವಿಶ್ವವಿದ್ಯಾಲಯ ತಂಡವು ವಿಶ್ವೇಶ್ವರಯ್ಯ ತಾಂತ್ರಿಕ ವಿ.ವಿ ತಂಡವನ್ನು ಸೋಲಿಸಿ ಮೂರನೇ ಸ್ಥಾನ ಪಡೆಯಿತು. ವಿವಿಧ ರಾಜ್ಯಗಳ 61 ತಂಡಗಳು ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದವು.7 ಕ್ರೀಡಾಪಟುಗಳು ಉತ್ತಮ ಕ್ರೀಡಾಪಟು ಪ್ರಶಸ್ತಿಗೆ ಭಾಜನಾದರು.

ಉತ್ತಮ ಗೋಲ್‌ ಶೂಟರ್‌– ಯಶವಂತ್‌ ತೇಲ್ಕರ್ (ಮಂಗಳೂರು ವಿ.ವಿ), ಗೋಲ್ ಅಟ್ಯಾಕರ್‌- ಅವಿನಾಶ ಪಾಟೀಲ್ (ಸಾವಿತ್ರಿಬಾಯಿ ಫುಲೆ), ವಿಂಗ್ ಅಟ್ಯಾಕರ್‌- ಮೋಹನ್ ರಾಜ್ (ಮಂಗಳೂರು ವಿ.ವಿ), ಬೆಸ್ಟ್‌ ಸೆಂಟರ್‌ -ನಿಶಾಂತ್ ಎನ್.ಗೌಡ (ಬೆಂಗಳೂರು ವಿ.ವಿ), ವಿಂಗ್ ಡಿಫೆನ್ಸ್- ಪವನ್ (ಮಂಗಳೂರು ವಿ.ವಿ), ಗೋಲ್ ಡಿಫೆನ್ಸ್ -ಶ್ರೀಕಾಂತ್ ಜಾಧವ್ (ಸಾವಿತ್ರಿಬಾಯಿ ಫುಲೆ), ಗೋಲ್ ಕೀಪರ್ -ಯು.ಆರ್.ಸಾತ್ವಿಕ್ (ವಿಶ್ವೇಶ್ವರಯ್ಯ ತಾಂತ್ರಿಕ ವಿ.ವಿ) ಅವರಿಗೆ ಪ್ರಶಸ್ತಿ ವಿತರಿಸಲಾಯಿತು.

ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯೆ ಕನ್ನಿಕಾ ಪರಮೇಶ್ವರ, ಕ್ರೀಡಾಪಟು ಮಹದೇದ್‌ಗೌಡ, ಸಾಹೇ ವಿಶ್ವವಿದ್ಯಾಲಯದ ಕುಲಪತಿ ಕೆ.ಬಿ.ಲಿಂಗೇಗೌಡ, ರಿಜಿಸ್ಟ್ರಾರ್‌ ಎಂ.ಝೆಡ್.ಕುರಿಯನ್, ಸಿದ್ಧಾರ್ಥ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ.ಸಾಣಿಕೊಪ್ಪ, ಉಪ ಪ್ರಾಂಶುಪಾಲ ಡಾ.ಪ್ರಭಾಕರ್, ಸಹಾಯಕ ಕುಲಸಚಿವ ಸುದೀಪ್ ಕುಮಾರ್, ದೈಹಿಕ ಶಿಕ್ಷಣ ನಿರ್ದೇಶಕ ಶಶಿಕುಮಾರ್‌ ಪಾಲ್ಗೊಂಡಿದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.