ADVERTISEMENT

ಯುರೋ ಕಪ್‌ ಫುಟ್‌ಬಾಲ್‌ | ಸೆಮಿಗೆ ನೆದರ್ಲೆಂಡ್ಸ್‌; ಟರ್ಕಿಗೆ ನಿರಾಸೆ

ಡಚ್‌ಗೆ ವರದಾನವಾದ ‘ಉಡುಗೊರೆ’ ಗೋಲು

ಏಜೆನ್ಸೀಸ್
Published 7 ಜುಲೈ 2024, 22:13 IST
Last Updated 7 ಜುಲೈ 2024, 22:13 IST
ಗೋಲು ಗಳಿಸಿದ ಸಂಭ್ರಮದಲ್ಲಿ ನೆದರ್ಲೆಂಡ್ಸ್‌ ತಂಡದ ಆಟಗಾರರು – ಎಎಫ್‌ಪಿ ಚಿತ್ರ
ಗೋಲು ಗಳಿಸಿದ ಸಂಭ್ರಮದಲ್ಲಿ ನೆದರ್ಲೆಂಡ್ಸ್‌ ತಂಡದ ಆಟಗಾರರು – ಎಎಫ್‌ಪಿ ಚಿತ್ರ   

ಬರ್ಲಿನ್‌: ಆರಂಭಿಕ ಹಿನ್ನಡೆ ಅನುಭವಿಸಿದ್ದ ನೆದರ್ಲೆಂಡ್ಸ್‌ ತಂಡವು ‘ಉಡುಗೊರೆ’ ಗೋಲಿನ ನೆರವಿನಿಂದ ಯುರೋ ಕಪ್‌ ಫುಟ್‌ಬಾಲ್‌ ಟೂರ್ನಿಯಲ್ಲಿ 2–1ರಿಂದ ಟರ್ಕಿ ತಂಡವನ್ನು ಮಣಿಸಿ ಸೆಮಿಫೈನಲ್‌ಗೆ ಲಗ್ಗೆ ಹಾಕಿತು.

ಶನಿವಾರ ತಡರಾತ್ರಿ ನಡೆದ ರೋಚಕ ಹಣಾಹಣಿಯಲ್ಲಿ 76ನೇ ನಿಮಿಷದಲ್ಲಿ ಟರ್ಕಿಯ ಮೆರ್ಟ್ ಮುಲ್ದೂರ್ ಅವರು ನೆದರ್ಲೆಂಡ್ಸ್‌ ತಂಡಕ್ಕೆ ‘ಉಡುಗೊರೆ’ ಗೋಲು ನೀಡಿದರು. ಇದೇ ಗೋಲು ಡಚ್‌ ತಂಡದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದರೆ, ಟರ್ಕಿಯ ಸೆಮಿಫೈನಲ್‌ ಕನಸನ್ನು ಭಗ್ನಗೊಳಿಸಿತು.

ನೆದರ್ಲೆಂಡ್ಸ್ ತಂಡವು ಡಾರ್ಟ್‌ಮಂಡ್‌ನಲ್ಲಿ ಬುಧವಾರ ನಡೆಯಲಿರುವ ಎರಡನೇ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್‌ ತಂಡವನ್ನು ಎದುರಿಸಲಿದೆ. ಮಂಗಳವಾರ ಮೊದಲ ಸೆಮಿಫೈನಲ್‌ನಲ್ಲಿ ಸ್ಪೇನ್ ತಂಡವು ಫ್ರಾನ್ಸ್ ತಂಡವನ್ನು ಎದುರಿಸಲಿದೆ.

ADVERTISEMENT

ಮೊದಲಾರ್ಧದಲ್ಲೇ ಸಮೇಟ್‌ ಅಕೈಡಿನ್ (35ನೇ ನಿಮಿಷ) ಅವರು ಟರ್ಕಿ ತಂಡಕ್ಕೆ ಮುನ್ನಡೆ ಒದಗಿಸಿದ್ದರು. ಆದರೆ, 70ನೇ ನಿಮಿಷದಲ್ಲಿ ನೆದರ್ಲೆಂಡ್ಸ್‌ನ ಸ್ಟೀಫನ್ ಡಿ ವ್ರಿಜ್ ಚೆಂಡನ್ನು ಗುರಿ ಸೇರಿಸಿ ಸ್ಕೋರ್‌ ಸಮಬಲಗೊಳಿಸಿದರು. ಅದಾದ ಆರು ನಿಮಿಷದಲ್ಲೇ ಉಡುಗೊರೆ ಗೋಲಿನಿಂದ ದೊರೆತ ಮುನ್ನಡೆಯನ್ನು ಪಂದ್ಯದ ಅಂತ್ಯದವರೆಗೂ ಕಾಯ್ದುಕೊಂಡ ಡಚ್‌ ಆಟಗಾರರು, ನಾಲ್ಕರ ಘಟ್ಟವನ್ನು ಪ್ರವೇಶಿಸಿದರು.

‘ಇಂದಿನ ಪಂದ್ಯ ನಿಜವಾಗಿಯೂ ರೋಚಕವಾಗಿತ್ತು. ಟರ್ಕಿ ತಂಡವೂ ಬಲಿಷ್ಠವಾಗಿತ್ತು. ನಾವು ಸಾಂಘಿಕ ಪ್ರದರ್ಶನ ನೀಡಿದೆವು. ಗೆಲುವಿಗೆ ನಮ್ಮ ತಂಡ ಅರ್ಹವಾಗಿತ್ತು’ ಎಂದು ಪಂದ್ಯದ ಬಳಿಕ ಸ್ಟೀಫನ್ ಡಿ ವ್ರಿಜ್ ಪ್ರತಿಕ್ರಿಯಿಸಿದರು.

‘ಸ್ಟ್ರೈಕರ್ ವೂಟ್ ವೆಘೋರ್ಸ್ಟ್ ದ್ವಿತೀಯಾರ್ಧಕ್ಕೆ ಪ್ರವೇಶ ಮಾಡಿದ ಬಳಿಕ ಪಂದ್ಯ ತಿರುವು ಪಡೆಯಿತು. ಮುಂಚೂಣಿಯಲ್ಲಿ ಹೋರಾಟ ನಡೆಸಿದ ಅವರು, ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು’ ಎಂದು ಸ್ಟೀಫನ್‌ ಹೇಳಿದರು. 

ಡಿಫೆಂಡರ್ ಮೆರಿಹ್ ಡೆಮಿರಾಲ್ ಅವರ ಅನುಪಸ್ಥಿತಿಯಲ್ಲಿ ಟರ್ಕಿ ತಂಡವು ಕಣಕ್ಕಿಳಿಯಿತು. ಮಂಗಳವಾರ ನಡೆದ ಆಸ್ಟ್ರಿಯಾ ವಿರುದ್ಧದ ಪಂದ್ಯದಲ್ಲಿ ಸ್ಕೋರ್‌ ಗಳಿಸಿದ ನಂತರ ರಾಷ್ಟ್ರೀಯತೆಯ ಕೈ ಸನ್ನೆ ಮಾಡಿದ್ದಕ್ಕಾಗಿ ಡೆಮಿರಾಲ್ ಎರಡು ಪಂದ್ಯಗಳಿಗೆ ಅಮಾನತುಗೊಂಡಿದ್ದರು.


ಸೆಮಿಫೈನಲ್‌ ಹಣಾಹಣಿ

ತಂಡಗಳು;ದಿನಾಂಕ, ಸಮಯ

ಸ್ಪೇನ್‌–ಫ್ರಾನ್ಸ್‌;ಜುಲೈ 10, ರಾತ್ರಿ 12.30

ನೆದರ್ಲೆಂಡ್ಸ್‌–ಇಂಗ್ಲೆಂಡ್‌;ಜುಲೈ 11, ರಾತ್ರಿ 12.30

ಗೆಲುವಿನ ಸಂಭ್ರಮದಲ್ಲಿ ನೆದರ್ಲೆಂಡ್ಸ್‌ ತಂಡದ ಆಟಗಾರರು –ಎಪಿ/ ಪಿಟಿಐ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.