ADVERTISEMENT

ನೆಟ್ಟಕಲ್ಲಪ್ಪ ರಾಷ್ಟ್ರಮಟ್ಟದ ಈಜು: ಕಣಕ್ಕಿಳಿಯಲಿರುವ 300 ಈಜುಪಟುಗಳು

ನೆಟ್ಟಕಲ್ಲಪ್ಪ ರಾಷ್ಟ್ರಮಟ್ಟದ ಈಜು 9ರಿಂದ; ಸ್ಕಿನ್ಸ್‌ ಸ್ಪರ್ಧೆಗಳ ಪ್ರಮುಖ ಆಕರ್ಷಣೆ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2024, 16:07 IST
Last Updated 5 ನವೆಂಬರ್ 2024, 16:07 IST
<div class="paragraphs"><p>Swimming</p></div>

Swimming

   

ಬೆಂಗಳೂರು: ನೆಟ್ಟಕಲ್ಲಪ್ಪ ಈಜು ಕೇಂದ್ರವು (ಎನ್‌ಎಸಿ) ನವೆಂಬರ್ 9 ಹಾಗೂ 10ರಂದು ಮೂರನೇ ವರ್ಷದ ‘ನೆಟ್ಟಕಲ್ಲಪ್ಪ ರಾಷ್ಟ್ರಮಟ್ಟದ  ಈಜು ಚಾಂಪಿಯನ್‌ಷಿಪ್’ ಆಯೋಜಿಸಲಿದೆ.

ಪದ್ಮನಾಭ ನಗರದಲ್ಲಿರುವ ಎನ್‌ಎಸಿ ಈಜುಕೊಳದಲ್ಲಿ ನಡೆಯುವ ಸ್ಪರ್ಧೆಗಳಲ್ಲಿ ಬೇರೆ ಬೇರೆ ರಾಜ್ಯಗಳ 300 ಈಜುಪಟುಗಳು ಭಾಗವಹಿಸಲಿದ್ದಾರೆ. ಅದರಲ್ಲಿ ಕಳೆದೆರಡು ವರ್ಷ ಗಮನ ಸೆಳೆದಿದ್ದ ಸ್ಕಿನ್ಸ್‌ ವಿಭಾಗದ ಸ್ಪರ್ಧೆಗಳು ಈ ಸಲವೂ ಆಯೋಜನೆಗೊಳ್ಳಲಿವೆ.

ADVERTISEMENT

‘ಈಜುಪಟುಗಳನ್ನು ಪ್ರೋತ್ಸಾಹಿಸುವ ಉದ್ದೇಶದೊಂದಿಗೆ ನಗರದಲ್ಲಿ 2012ರಲ್ಲಿ ಎನ್‌ಎಸಿ ಆರಂಭಿಸಲಾಗಿದೆ. ಕಳೆದೆರಡು ವರ್ಷವೂ ಉತ್ತಮ ಸಂಖ್ಯೆಯಲ್ಲಿ ಈಜುಪಟುಗಳು  ಭಾಗವಹಿಸಿದ್ದರು. ಈ ಬಾರಿಯೂ ಕರ್ನಾಟಕದ ನೂರಕ್ಕೂ ಹೆಚ್ಚು ಸ್ಪರ್ಧಿಗಳು ಇದ್ದಾರೆ.  ಕೇರಳ, ತಮಿಳುನಾಡು,  ಹರಿಯಾಣ, ಗುಜರಾತ್‌,  ಆಂಧ್ರಪ್ರದೇಶ
ಮತ್ತು ಪಶ್ಚಿಮ ಬಂಗಾಳ ಸೇರಿದಂತೆ ವಿವಿಧ ರಾಜ್ಯಗಳ ಈಜುಪಟುಗಳು ಭಾಗವಹಿಸಲಿದ್ದಾರೆ’  ಎಂದು ಕೇಂದ್ರದ ಮುಖ್ಯಸ್ಥ ಡಾ.ವರುಣ್‌ ನಿಜಾವನ್‌ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಈ ಚಾಂಪಿಯನ್‌ಷಿಪ್‌ ಒಟ್ಟು ₹ 10 ಲಕ್ಷ ಬಹುಮಾನ ಮೊತ್ತ ಒಳಗೊಂಡಿದೆ. ಈಜು ಕ್ರೀಡೆ ಮತ್ತು ಈಜುಪಟುಗಳಿಗೆ ಉತ್ತಮ ಪ್ರೋತ್ಸಾಹ ನೀಡುವುದು ನಮ್ಮ ಧ್ಯೇಯ’ ಎಂದರು.

‘ಒಲಿಂಪಿಯನ್ ಧಿನಿಧಿ ದೇಸಿಂಗು ಈ ಕೂಟದ ಪ್ರಮುಖ ಆಕರ್ಷಣೆಯಾಗಿದ್ದಾರೆ. ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದ ಈಜುಪಟುಗಳಾದ ಅಕ್ಷಜಾ ಠಾಕೂರಿಯಾ, ಹಷಿಕಾ ರಾಮಚಂದ್ರ, ಹರ್ಷಿತಾ ಜಯರಾಮ್, ಅನುಮತಿ ಚೌಗುಲೆ, ಎಸ್‌. ದರ್ಶನ್, ಎಸ್‌. ದಕ್ಷಣ್, ಎಸ್‌. ಲಕ್ಷ್ಯ, ಬಿ ಜತೀನ್, ಎ.ಕೆ. ಲಿನೇಶಾ, ಎಸ್. ಸುನೀಶ್, ಎಸ್‌. ಉನ್ನಿಕೃಷ್ಣನ್, ಸಮರ್ಥ್ ಗೌಡ, ವಿಹಿತಾ ನಯನಾ, ಆಕಾಶ್ ಮಾನ್ ಅವರು ಭಾಗವಹಿಸುವರು’  ಎಂದು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದ ಕೋಚ್ ಶರತ್ ಚಂದ್ರ ಹೇಳಿದರು. 

‘ಅತ್ಯಂತ ರೋಚಕ ಮತ್ತು ಕಠಿಣ ಸ್ಪರ್ಧಾತ್ಮಕವಾದ ಸ್ಕಿನ್ಸ್‌ (SKINS) ಪೈಪೋಟಿ ಈ ಸಲವೂ ಇರಲಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಇದು ಅತ್ಯಂತ ಜನಪ್ರಿಯ ಮಾದರಿಯಾಗಿದೆ. ಅದರಲ್ಲಿಯೂ ಯುರೋಪ್‌ನಲ್ಲಿ ಹೆಚ್ಚು ನಡೆಯುವ ಸ್ಪರ್ಧೆಯಾಗಿದೆ. ಭಾರತದಲ್ಲಿ ಮೊದಲಿಗೆ ಈ ಮಾದರಿಯನ್ನು ಆಯೋಜಿಸಿದ ಹೆಗ್ಗಳಿಕೆ ನಮ್ಮದಾಗಿದೆ. ಟಿ20 ಕ್ರಿಕೆಟ್‌ ನಲ್ಲಿರುವಂತಹ ರೋಚಕತೆ ಸ್ಕಿನ್ಸ್‌ನಲ್ಲಿದೆ. 50 ಮೀಟರ್ಸ್‌ ವಿಭಾಗದ ಸ್ಪರ್ಧೆಗಳಲ್ಲಿ ಸ್ಕಿನ್ಸ್‌ ನಡೆಯುತ್ತದೆ.  ಈಜುಪಟುಗಳ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯಕ್ಕೆ ಸವಾಲೊಡ್ಡುವ ಸ್ಪರ್ಧೆ ಇದು' ಎಂದು ವಿವರಿಸಿದರು. 

‘ಇದಲ್ಲದೇ 100 ಮೀಟರ್ಸ್, 200 ಮೀಟರ್ಸ್  ಮತ್ತು 400 ಮೀಟರ್ಸ್ ವಿಭಾಗಗಳ ಲಾಂಗ್‌ ಕೋರ್ಸ್‌ ಸ್ಪರ್ಧೆಗಳು ನಡೆಯಲಿವೆ. ಇದರಿಂದಾಗಿ ಈ ಈಜು ಕೂಟವು ವೈವಿಧ್ಯಮಯವಾಗಿದೆ’ ಎಂದು ತಿಳಿಸಿದರು. 

‘ನ. 9ರಂದು ಸಂಜೆ 5 ಗಂಟೆಗೆ ಒಲಿಂಪಿಯನ್ ಈಜುಪಟು ನಿಶಾ ಮಿಲೆಟ್ ಅವರು ಕೂಟವನ್ನು ಉದ್ಘಾಟಿಸುವರು. ಎರಡೂ ದಿನವೂ ಬೆಳಿಗ್ಗೆ 10 ರಿಂದ ರಾತ್ರಿ 7ರವರೆಗೆ ಈಜು ಸ್ಪರ್ಧೆಗಳು ನಡೆಯಲಿವೆ’ ಎಂದರು. 

ಸುದ್ದಿಗೋಷ್ಠಿಯಲ್ಲಿ ಕೋಚ್‌ಗಳಾದ ಅಂಕುಶ್, ಜಿಜೇಶ್ ಹಾಜರಿದ್ದರು. 

ಎನ್‌ಎಸಿ ಕುರಿತು..

ನೆಟ್ಟಕಲ್ಲಪ್ಪ ಅಕ್ವಾಟಿಕ್ ಕೇಂದ್ರಕ್ಕೆ (ಎನ್‌ಎಸಿ)  ಡೆಕ್ಕನ್ ಹೆರಾಲ್ಡ್ ಮತ್ತು ಪ್ರಜಾವಾಣಿ ಪತ್ರಿಕಾ ಸಮೂಹದ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಕೆ.ಎ.ನೆಟ್ಟಕಲ್ಲಪ್ಪನವರ ನೆನಪಿನಲ್ಲಿ  ಅವರ ಹೆಸರನ್ನಿಡಲಾಗಿದೆ. ನೆಟ್ಟಕಲ್ಲಪ್ಪ ಅವರು ಕರ್ನಾಟಕದ ಕ್ರೀಡೆಗೆ ನೀಡಿದ ಕೊಡುಗೆ ಅಪಾರ. ಬ್ಯಾಡ್ಮಿಂಟನ್, ಮೌಂಟೆನಿಯರಿಂಗ್ ಮತ್ತು ಅಥ್ಲೆಟಿಕ್ಸ್‌ ಸೇರಿದಂತೆ ಹಲವು ಸಂಸ್ಥೆಗಳಿಗೆ ನೆರವಾಗಿದ್ದರು.

2012ರಲ್ಲಿ ನೆಟ್ಟಕಲ್ಲಪ್ಪ ಅಕ್ವಾಟಿಕ್ ಸೆಂಟರ್ ಆರಂಭವಾಯಿತು. ಈಜು ಕ್ರೀಡೆಗೆ ಇದುವರೆಗೆ ಮಹತ್ವದ ಕಾಣಿಕೆಯನ್ನು ನೀಡಿದ ಹೆಗ್ಗಳಿಕೆ ಸಂಸ್ಥೆಯದ್ದು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.