ಬೆಂಗಳೂರು: ಒಲಿಂಪಿಕ್ಸ್, ಅಂತರರಾಷ್ಟ್ರೀಯ ಮತ್ತು ಉದಯೋನ್ಮುಖ ಪ್ರತಿಭೆಗಳ ಪೈಪೋಟಿಯ ವಿಶಿಷ್ಟ ವೇದಿಕೆಯಾಗಿರುವ ನೆಟ್ಟಕಲ್ಲಪ್ಪ ರಾಷ್ಟ್ರಮಟ್ಟದ ಈಜು ಕೂಟವು ಶನಿವಾರ ಮತ್ತು ಭಾನುವಾರ ನಡೆಯಲಿದೆ.
ಪದ್ಮನಾಭ ನಗರದಲ್ಲಿರುವ ನೆಟ್ಟಕಲ್ಲಪ್ಪ ಅಕ್ವೆಟಿಕ್ ಸೆಂಟರ್ (ಎನ್.ಎ.ಸಿ) ಈಜುಕೊಳದಲ್ಲಿ ಕೂಟ ನಡೆಯಲಿದೆ. ಈಚೆಗೆ ಪ್ಯಾರಿಸ್ ಒಲಿಂಪಿಕ್ ಕೂಟದಲ್ಲಿ ಭಾಗವಹಿಸಿದ್ದ 14 ವರ್ಷ ವಯಸ್ಸಿನ ಈಜುಪಟು ಧಿನಿಧಿ ದೇಸಿಂಗು ಸೇರಿದಂತೆ ಹಲವು ಖ್ಯಾತನಾಮ ಈಜುಪಟುಗಳು ಇಲ್ಲಿ ಸ್ಪರ್ಧಿಸಲಿದ್ದಾರೆ. ಬೇರೆ ಬೇರೆ ರಾಜ್ಯಗಳ 300 ಈಜುಪಟುಗಳು ಭಾಗವಹಿಸಲಿದ್ದಾರೆ.
ಸತತ ಮೂರನೇ ವರ್ಷ ಈ ಕೂಟವನ್ನು ಆಯೋಜಿಸಲಾಗುತ್ತಿದೆ. ಕಳೆದೆರಡು ವರ್ಷ ಗಮನ ಸೆಳೆದಿದ್ದ ಸ್ಕಿನ್ಸ್ ವಿಭಾಗದ ಸ್ಪರ್ಧೆಗಳು ಈ ಸಲವೂ ಆಯೋಜನೆಗೊಳ್ಳಲಿವೆ.
‘ಈಜುಪಟುಗಳನ್ನು ಪ್ರೋತ್ಸಾಹಿಸುವ ಉದ್ದೇಶದೊಂದಿಗೆ ನಗರದಲ್ಲಿ 2012ರಲ್ಲಿ ಎನ್‌ಎಸಿ ಆರಂಭಿಸಲಾಗಿದೆ. ಕಳೆದೆರಡು ವರ್ಷವೂ ಉತ್ತಮ ಸಂಖ್ಯೆಯಲ್ಲಿ ಈಜುಪಟುಗಳು ಭಾಗವಹಿಸಿದ್ದರು. ಈ ಬಾರಿಯೂ ಕರ್ನಾಟಕದ ನೂರಕ್ಕೂ ಹೆಚ್ಚು ಸ್ಪರ್ಧಿಗಳು ಇದ್ದಾರೆ. ಕೇರಳ, ತಮಿಳುನಾಡು, ಹರಿಯಾಣ, ಗುಜರಾತ್, ಆಂಧ್ರಪ್ರದೇಶ ಮತ್ತು ಪಶ್ಚಿಮ ಬಂಗಾಳ ಸೇರಿದಂತೆ ವಿವಿಧ ರಾಜ್ಯಗಳ ಈಜುಪಟುಗಳು ಭಾಗವಹಿಸಲಿದ್ದಾರೆ’ ಎಂದು ಕೇಂದ್ರದ ಮುಖ್ಯಸ್ಥ ಡಾ.ವರುಣ್ ನಿಜಾವನ್ ತಿಳಿಸಿದ್ದಾರೆ.
ಈ ಚಾಂಪಿಯನ್‌ಷಿಪ್ ಒಟ್ಟು ₹ 10 ಲಕ್ಷ ಬಹುಮಾನ ಮೊತ್ತ ಒಳಗೊಂಡಿದೆ. ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದ ಈಜುಪಟುಗಳಾದ ಅಕ್ಷಜಾ ಠಾಕೂರಿಯಾ, ಹಷಿಕಾ ರಾಮಚಂದ್ರ, ಹರ್ಷಿತಾ ಜಯರಾಮ್, ಅನುಮತಿ ಚೌಗುಲೆ, ಎಸ್. ದರ್ಶನ್, ಎಸ್. ದಕ್ಷಣ್, ಎಸ್. ಲಕ್ಷ್ಯ, ಬಿ ಜತೀನ್, ಎ.ಕೆ. ಲಿನೇಶಾ, ಎಸ್. ಸುನೀಶ್, ಎಸ್. ಉನ್ನಿಕೃಷ್ಣನ್, ಸಮರ್ಥ್ ಗೌಡ, ವಿಹಿತಾ ನಯನಾ, ಆಕಾಶ್ ಮಾನ್ ಅವರು ಭಾಗವಹಿಸುವರು.
ಸ್ಕಿನ್ಸ್, 100 ಮೀಟರ್ಸ್, 200 ಮೀಟರ್ಸ್ ಮತ್ತು 400 ಮೀಟರ್ಸ್ ವಿಭಾಗಗಳ ಲಾಂಗ್ ಕೋರ್ಸ್ ಸ್ಪರ್ಧೆಗಳು ನಡೆಯಲಿವೆ.
‘ಶನಿವಾರ ಸಂಜೆ 5 ಗಂಟೆಗೆ ಒಲಿಂಪಿಯನ್ ಈಜುಪಟು ನಿಶಾ ಮಿಲೆಟ್ ಅವರು ಕೂಟವನ್ನು ಉದ್ಘಾಟಿಸುವರು. ಎರಡೂ ದಿನವೂ ಬೆಳಿಗ್ಗೆ 10 ರಿಂದ ರಾತ್ರಿ 7ರವರೆಗೆ ಈಜು ಸ್ಪರ್ಧೆಗಳು ನಡೆಯಲಿವೆ’ ಎಂದು ವರುಣ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.