ADVERTISEMENT

ನನ್ನ ವಿರುದ್ಧ ಸೋಲುವಂತೆ ಎಂದೂ ಕೇಳಿಲ್ಲ... ಬಜರಂಗ್ ಹೇಳಿಕೆ ಸುಳ್ಳು: ದತ್ ಕಿಡಿ

ಪಿಟಿಐ
Published 25 ಜೂನ್ 2023, 17:18 IST
Last Updated 25 ಜೂನ್ 2023, 17:18 IST
ಯೋಗೇಶ್ವರ್‌ ದತ್‌
ಯೋಗೇಶ್ವರ್‌ ದತ್‌   

ನವದೆಹಲಿ: ‘ನನ್ನ ವಿರುದ್ಧ ಕುಸ್ತಿ ಬೌಟ್‌ಗಳಲ್ಲಿ ಉದ್ದೇಶಪೂರ್ವಕವಾಗಿ ಸೋಲುವಂತೆ ಬಜರಂಗ್ ಅವರನ್ನು ಯಾವತ್ತೂ ಕೇಳಿಕೊಂಡಿಲ್ಲ. ಬಜರಂಗ್ ಅಪ್ಪಟ ಸುಳ್ಳು ಹೇಳುತ್ತಿದ್ದಾರೆ‘ ಎಂದು ಒಲಿಂಪಿಯನ್ ಕುಸ್ತಿಪಟು ಯೋಗೇಶ್ವರ್ ದತ್ ಕಿಡಿ ಕಾರಿದ್ದಾರೆ.

’2016ರ ಒಲಿಂಪಿಕ್ ಕೂಟದ  ಆಯ್ಕೆ ಟ್ರಯಲ್ಸ್‌ನಲ್ಲಿ ಬಜರಂಗ್ ಕೂಡ 65 ಕೆ.ಜಿ ವಿಭಾಗದಲ್ಲಿದ್ದರು. ಆದರೆ ನಾವಿಬ್ಬರೂ ಹಣಾಹಣಿ ಮಾಡಿರಲಿಲ್ಲ. ಅಮಿತ್ ಧನಕರ್ ವಿರುದ್ಧ ಬಜರಂಗ್ ಸೋತಿದ್ದರು. ಫೈನಲ್ ಬೌಟ್‌ನಲ್ಲಿ ನಾನು ಅಮಿತ್ ಎದುರು ಸೆಣಸಾಡಿದ್ದೆ‘ ಎಂದು ದತ್ ಭಾನುವಾರ ಹೇಳಿದ್ದಾರೆ.

‘ಪ್ರೊ ರೆಸ್ಲಿಂಗ್ ಲೀಗ್‌ ನಲ್ಲಿ ನಾವಿಬ್ಬರೂ ಹಣಾಹಣಿ ನಡೆಸಿದ್ದೆವು. ಅದರಲ್ಲಿ ನಾನು 3–0ಯಿಂದ ಗೆದ್ದಿದೆ. ನಾನು ಅವಾಗ ಮನಸ್ಸು ಮಾಡಿದ್ದರೆ ಇನ್ನೂ ಹೆಚ್ಚು ಅಂಕಗಳನ್ನು ಗಳಿಸಬಹುದಿತ್ತು. ಆದರೆ ಅದೊಂದು ಪ್ರದರ್ಶನ ಬೌಟ್ ಎಂಬುದು ಎಲ್ಲರಿಗೂ ಗೊತ್ತಿತ್ತು‘ ಎಂದು ಭಾರತೀಯ ಜನತಾ ಪಕ್ಷದ ಧುರೀಣರೂ ಆಗಿರುವ ದತ್ ಹೇಳಿದರು.

ADVERTISEMENT

’2016ರ ಒಲಿಂಪಿಕ್‌ಗಿಂತ ಮೊದಲು ವಿದೇಶಕ್ಕೆ ಹೋದಾಗಲೆಲ್ಲ ನನ್ನೊಂದಿಗೆ ಬಜರಂಗ್ ಅವರನ್ನು ಕರೆದುಕೊಂಡು ಹೋಗುತ್ತಿದ್ದೆ. ಜೊತೆಯಾಗಿ ಅಭ್ಯಾಸ ಮಾಡಿದ್ದೆವು. ಇಷ್ಟೆಲ್ಲದರ ನಂತರವೂ ಅವರು ನನಗೆ ವಿಶ್ವಾಸದ್ರೋಹ ಮಾಡಿದರು. ಅವರನ್ನು ನನ್ನ ತೇಜೊವಧೆ ಮಾಡಲು ಏಕೆ ಪ್ರಯತ್ನಿಸುತ್ತಿದ್ದಾರೆಂದು ಅರ್ಥವಾಗುತ್ತಿಲ್ಲ‘ ಎಂದಿದ್ದಾರೆ.

’2018ರಲ್ಲಿ ಬಜರಂಗ್ ಅವರು ತಾವು ಏಷ್ಯನ್‌ ಗೇಮ್ಸ್‌ಗೆ ಹಾಗೂ ನಾನು ಕಾಮನ್‌ವೆಲ್ತ್‌ ಕೂಟಕ್ಕೆ ಹೋಗಬೇಕೆಂದು ಹೇಳಿದ್ದರು. ಅದಕ್ಕೆ ನಾನು ಒಪ್ಪಿರಲಿಲ್ಲ. ಟ್ರಯಲ್ಸ್‌ ಮೂಲಕವೇ ಅರ್ಹತೆ ಪಡೆಯಲು ನಿರ್ಧರಿಸಿದ್ದೆ. ಅದರಿಂದಾಗಿ ಸಿಟ್ಟಿಗೆದ್ದಿದ್ದ ಬಜರಂಗ್ ನನ್ನೊಂದಿಗೆ ಮಾತುಕತೆ ಬಿಟ್ಟಿದ್ದರು. 2016ರ ನಂತರ ನಾನು ಯಾವುದೇ ಟೂರ್ನಿಯಲ್ಲಿಯೂ ಭಾಗವಹಿಸಿಲ್ಲ. ಯಾವುದೇ ಶಿಬಿರದಲ್ಲಿಯೂ ಇರಲಿಲ್ಲ. ನಾನಂತೂ ಈಗ ಮಾಜಿ ಕುಸ್ತಿಪಟು‘ ಎಂದು ಲಂಡನ್ ಒಲಿಂಪಿಕ್ ಪದಕ ವಿಜೇತ ಯೋಗೇಶ್ವರ್ ಹೇಳಿದ್ದಾರೆ.

ಯೋಗೇಶ್ವರ್ ದತ್ ಅವರು ತಮ್ಮೊಂದಿಗೆ ಹಲವು ಬಾರಿ ಕುಸ್ತಿ ಬೌಟ್‌ಗಳಲ್ಲಿ ಸೋಲುವಂತೆ ಕೇಳಿಕೊಂಡಿದ್ದರು ಎಂದು ಬಜರಂಗ್ ಶನಿವಾರ ಸಾಮಾಜಿಕ ಜಾಲತಾಣದ ಲೈವ್‌ನಲ್ಲಿ ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.