ADVERTISEMENT

ವಿಶ್ವ ಪ್ಯಾರಾ ಬ್ಯಾಡ್ಮಿಂಟನ್ ಅಗ್ರ ಕ್ರಮಾಂಕಕ್ಕೆ ಕನ್ನಡಿಗ ಸುಹಾಸ್‌

ಪಿಟಿಐ
Published 25 ಜೂನ್ 2024, 16:25 IST
Last Updated 25 ಜೂನ್ 2024, 16:25 IST
ಬ್ಯಾಡ್ಮಿಂಟನ್
ಬ್ಯಾಡ್ಮಿಂಟನ್   

ನವದೆಹಲಿ: ಭಾರತದ ಪ್ಯಾರಾ ಬ್ಯಾಡ್ಮಿಂಟನ್ ಆಟಗಾರ, ಕನ್ನಡಿಗ  ಸುಹಾಸ್ ಯತಿರಾಜ್ ಅವರು ಮಂಗಳವಾರ ಪ್ರಕಟಗೊಂಡಿರುವ ಬಿಡಬ್ಲ್ಯುಎಫ್‌ ಪ್ಯಾರಾ ವಿಶ್ವ ರ್‍ಯಾಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕೆ ಏರಿದ್ದಾರೆ. ಇದುವರೆಗೆ ಫ್ರಾನ್ಸ್‌ನ ಲುಕಾಸ್‌ ಮಝುರ್ ಆ ಸ್ಥಾನದಲ್ಲಿದ್ದರು.

ಅರ್ಜುನ ಪ್ರಶಸ್ತಿ ಪುರಸ್ಕೃತರಾಗಿರುವ ಐಎಎಸ್‌ ಅಧಿಕಾರಿ ಸುಹಾಸ್, ಈ ಕುರಿತು ಎಕ್ಸ್‌ನಲ್ಲಿ ಸಂತಸ ಹಂಚಿಕೊಂಡಿದ್ದಾರೆ.

‘ಕೊನೆಗೂ ವಿಶ್ವ ನಂಬರ್‌ 1. ಈ ವಿಷಯ ಹಂಚಿಕೊಳ್ಳಲು ಸಂಭ್ರಮನಿಸುತ್ತಿದೆ. ಇಂದು ಪ್ರಕಟವಾಗಿರುವ ವಿಶ್ವ ಬ್ಯಾಡ್ಮಿಂಟನ್‌ ಫೆಡರೇಷನ್‌ನ ಪ್ಯಾರಾ ರ್‍ಯಾಂಕಿಂಗ್‌ನ ಪುರುಷರ ಸಿಂಗಲ್ಸ್‌ನಲ್ಲಿ ನನಗೆ ಅಗ್ರ ಕ್ರಮಾಂಕ ದೊರಕಿದೆ. ನನ್ನ ಜೀವನದಲ್ಲಿ ಮೊದಲ ಬಾರಿ. ಎಲ್ಲರ ಆಶೀರ್ವಾದ ಮತ್ತು ಹಾರೈಕೆಗೆ ಧನ್ಯವಾದಗಳು’ ಎಂದು ಬರೆದಿದ್ದಾರೆ.

ADVERTISEMENT

ಅವರು 60,527 ಪಾಯಿಂಟ್ಸ್‌ ಪಡೆದಿದ್ದಾರೆ. ಫ್ರಾನ್ಸ್‌ನ ಪ್ರತಿಸ್ಪರ್ಧಿ 58,953 ಪಾಯಿಂಟ್ಸ್ ಗಳಿಸಿದ್ದಾರೆ.

ಪಾದದ ಕೀಲಿನಲ್ಲಿ ನ್ಯೂನತೆ ಹೊಂದಿರುವ ಅವರು ಎಸ್‌ಎಲ್‌–4 ಕೆಟಗರಿಯಲ್ಲಿ ಆಡುತ್ತಾರೆ.

ಹಾಸನದ ಅರಸೀಕೆರೆ ಮೂಲದವರಾದ ಅವರು ಶಿವಮೊಗ್ಗದಲ್ಲಿ ಪದವಿ ಓದಿ, ಸುರತ್ಕಲ್‌ನ ಎನ್‌ಐಟಿಕೆಯಿಂದ ಕಂಪ್ಯೂಟರ್ ಎಂಜಿನಿಯರಿಂಗ್ ಪದವಿ ಪಡೆದಿದ್ದರು.

ಪ್ರಸ್ತುತ ಉತ್ತರ ಪ್ರದೇಶ ಕ್ರೀಡಾ ಇಲಾಖೆ ಕಾರ್ಯದರ್ಶಿ ಮತ್ತು ಯುವಜನ ಕಲ್ಯಾಣ ಇಲಾಖೆ ಮಹಾನಿರ್ದೇಶಕರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.