ADVERTISEMENT

‍ಪ್ಯಾರಿಸ್ ಒಲಿಂಪಿಕ್ಸ್‌: ಸಿದ್ಧತೆಯ ಮಾಹಿತಿ ಪಡೆದ ಸಚಿವ ಮನ್ಸುಖ್ ಮಾಂಡವೀಯ

ಪಿಟಿಐ
Published 13 ಜೂನ್ 2024, 13:12 IST
Last Updated 13 ಜೂನ್ 2024, 13:12 IST
<div class="paragraphs"><p>ಮನ್ಸುಖ್ ಮಾಂಡವೀಯ</p></div>

ಮನ್ಸುಖ್ ಮಾಂಡವೀಯ

   

ನವದೆಹಲಿ: ನೂತನ ಕ್ರೀಡಾ ಸಚಿವ ಮನ್ಸುಖ್ ಮಾಂಡವೀಯ ಅವರು ಗುರುವಾರ ಭಾರತ ಒಲಿಂಪಿಕ್‌ ಸಂಸ್ಥೆ ಅಧ್ಯಕ್ಷೆ ಪಿ.ಟಿ.ಉಷಾ ಅವರನ್ನು ಇಲ್ಲಿ ಭೇಟಿಯಾಗಿ, ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಭಾರತದ ಕ್ರೀಡಾಪಟುಗಳು ನಡೆಸಿರುವ ಸಿದ್ಧತೆಗಳ ಬಗ್ಗೆ ಮಾಹಿತಿ ಪಡೆದುಕೊಂಡರು.

ಮಾಂಡವೀಯ ಮಂಗಳವಾರ ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದರು. ಸುಮಾರು ಒಂದು ಗಂಟೆ ನಡೆದ ಸಭೆಯಲ್ಲಿ ಕ್ರೀಡಾ ಖಾತೆ ರಾಜ್ಯ ಸಚಿವೆ ರಕ್ಷಾ ಖಡ್ಸೆ, ಕ್ರೀಡಾ ಇಲಾಖೆ ಕಾರ್ಯದರ್ಶಿ ಸುಜಾತಾ ಚತುರ್ವೇದಿ, ಭಾರತ ಕ್ರೀಡಾ ಪ್ರಾಧಿಕಾರದ ಮಹಾ ನಿರ್ದೇಶಕ ಸಂದೀಪ್ ಪ್ರಧಾನ್ ಮತ್ತಿತರರು ಪಾಲ್ಗೊಂಡಿದ್ದರು. ಜುಲೈ 26ರಂದು ಪ್ಯಾರಿಸ್‌ನಲ್ಲಿ ಆರಂಭವಾಗಲಿರುವ ಕ್ರೀಡೆಗಳಿಗೆ ಏನೇನು ಸಿದ್ಧತೆಗಳಾಗಿವೆ ಎಂಬ ಬಗ್ಗೆ ಸಚಿವರಿಗೆ ವಿವರ ನೀಡಲಾಯಿತು.

ADVERTISEMENT

‘ಐಒಎ ಅಧಿಕಾರಿಗಳ ಜೊತೆ ಮೊದಲ ಬಾರಿ ಮಾತುಕತೆ ನಡೆಸಿದೆ. ಪ್ಯಾರಿಸ್‌ ಕ್ರೀಡೆಗಳಿಗೆ ಭಾರತದ ಸಿದ್ಧತೆಗಳ ಬಗ್ಗೆ ನನಗೆ ಮಾಹಿತಿ ನೀಡಿದ್ದಾರೆ. ಸರ್ಕಾರ ಕ್ರೀಡಾಪಟುಗಳಿಗೆ ಸಾಧ್ಯವಿರುವ ಎಲ್ಲ ಬೆಂಬಲ ನೀಡಲು ಬದ್ಧವಾಗಿದೆ’ ಎಂದು ಮಾಂಡವೀಯ ಮಾಧ್ಯಮದವರಿಗೆ ತಿಳಿಸಿದರು.

ಸಚಿವರೊಂದಿಗೆ ಸಂವಾದ ಉತ್ತಮ ರೀತಿಯಲ್ಲಿ ನಡೆದಿದೆ ಎಂದಿರುವ ಉಷಾ ವಿವರಗಳನ್ನು ನೀಡಲಿಲ್ಲ. ಸಚಿವರು ಐಒಎ ಬಗ್ಗೆ ಮತ್ತು ಒಲಿಂಪಿಕ್ಸ್ ಸಿದ್ಧತೆಗಳ ಬಗ್ಗೆ ವಿವರ ಪಡೆದುಕೊಂಡರು ಎಂದರು.

‘ಈ ಬಾರಿ ಕ್ರೀಡಾಪಟುಗಳಿಗೆ ಎಲ್ಲ ನೆರವನ್ನೂ ನೀಡಿದ್ದೇವೆ. ಅವರೇನು ಬಯಸಿದ್ದರೊ ಎಲ್ಲವನ್ನೂ ಕೊಡಲಾಗಿದೆ. ಈ ಬಾರಿ ಟೋಕಿಯೊ ಒಲಿಂಪಿಕ್ಸ್‌ಗಿಂತಲೂ ಹೆಚ್ಚಿನ ಪದಕಗಳನ್ನು ನಿರೀಕ್ಷಿಸಿದ್ದೇವೆ. ಆದರೆ ಯಾವುದೇ ಸಂಖ್ಯೆ ಹೇಳಿ ಕ್ರೀಡಾಪಟುಗಳ ಮೇಲೆ ಒತ್ತಡ ಹೇರುವುದಿಲ್ಲ’ ಎಂದರು.

ಈಗಾಗಲೇ 97 ಮಂದಿ ಅಥ್ಲೀಟುಗಳು ಅರ್ಹತೆ ಪಡೆದಿದ್ದಾರೆ. ಕ್ರೀಡೆಗಳ ಆರಂಭಕ್ಕೆ ಮೊದಲು 115 ರಿಂದ 120 ಮಂದಿ ಅರ್ಹತೆ ಪಡೆಯಬಹುದೆಂಬ ನಿರೀಕ್ಷೆಯಿದೆ’ ಎಂದು ಭಾರತದ ದಿಗ್ಗಜ ಅಥ್ಲೀಟ್‌ ಆಗಿದ್ದ ಉಷಾ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.