ADVERTISEMENT

ಬಾಕ್ಸಿಂಗ್‌ | ಎಲೋರ್ಡಾ ಕಪ್‌: ನಿಖತ್‌ ಶುಭಾರಂಭ

ಎರಡನೇ ಸುತ್ತಿಗೆ ಮೀನಾಕ್ಷಿ, ಅನಾಮಿಕಾ

ಪಿಟಿಐ
Published 13 ಮೇ 2024, 15:37 IST
Last Updated 13 ಮೇ 2024, 15:37 IST
ನಿಖತ್ ಜರೀನ್ –ಪಿಟಿಐ ಚಿತ್ರ
ನಿಖತ್ ಜರೀನ್ –ಪಿಟಿಐ ಚಿತ್ರ   

ಅಸ್ತಾನಾ, ಕಜಕಸ್ತಾನ: ಹಾಲಿ ವಿಶ್ವ ಚಾಂಪಿಯನ್ ನಿಖತ್ ಜರೀನ್ (52 ಕೆಜಿ) ಅವರು ಇಲ್ಲಿ ಸೋಮವಾರ ಆರಂಭಗೊಂಡ ಎಲೋರ್ಡಾ ಕಪ್‌ ಬಾಕ್ಸಿಂಗ್‌ ಟೂರ್ನಿಯ 52 ಕೆ.ಜಿ. ವಿಭಾಗದ ಮೊದಲ ಸುತ್ತಿನಲ್ಲಿ ಕಜಕಸ್ತಾನನ ರಾಖಿಂಬರ್ಡಿ ಝನ್ಸಾಯಾ ವಿರುದ್ಧ ಸುಲಭ ಗೆಲುವು ದಾಖಲಿಸಿದರು.

27 ವರ್ಷದ ಭಾರತದ ಬಾಕ್ಸರ್‌ ನಿಖತ್‌ ಅವರು 5–0ಯಿಂದ ಎದುರಾಳಿಯನ್ನು ಮಣಿಸಿ ಮುನ್ನಡೆದರು. ಮೀನಾಕ್ಷಿ (48 ಕೆ.ಜಿ) ಮತ್ತು ಅನಾಮಿಕಾ (50 ಕೆ.ಜಿ) ಅವರೂ ಶುಭಾರಂಭ ಮಾಡಿದರು.

ಮೀನಾಕ್ಷಿ ಅವರು 4–1 ಅಂತರದಲ್ಲಿ ಆತಿಥೇಯ ದೇಶದ ಗ್ಯಾಸ್ಸಿಮೊವಾ ರೊಕ್ಸಾನಾ ವಿರುದ್ಧ ಗೆಲುವು ಸಾಧಿಸಿದರೆ, ಅನಾಮಿಕಾ ಅವರು  ಜುಮಾಬಾಯೆವಾ ಅರೈಲಿಮ್ ಅವರನ್ನು ಸೋಲಿಸಿದರು. ರೆಫರಿ ಈ ಬೌಟ್‌ ಸ್ಥಗಿತಗೊಳಿಸುವ ಮುನ್ನ (ಆರ್‌ಎಸ್‌ಸಿ) ಮೊದಲ ಸುತ್ತಿನಲ್ಲಿ ಅನಾಮಿಕ ಮೇಲುಗೈ ಸಾಧಿಸಿದ್ದರು. 

ADVERTISEMENT

ಆದರೆ, ಭಾರತದ ಇಶ್ಮೀತ್ ಸಿಂಗ್ (75 ಕೆಜಿ) ಮತ್ತು ಸೋನಿಯಾ (54 ಕೆಜಿ) ನಿರಾಸೆ ಮೂಡಿಸಿದರು. ಅವರು ಕ್ರಮವಾಗಿ ಕಜಕಸ್ತಾನದ ಅರ್ಮಾನುಲಿ ಅರ್ಮಾಟ್ ಮತ್ತು ಚೀನಾದ ಚಾಂಗ್ ಯುವಾನ್ ಅವರಿಗೆ ಶರಣಾದರು.

ಆರು ಬಾರಿ ಏಷ್ಯನ್ ಚಾಂಪಿಯನ್‌ಷಿಪ್‌ ಪದಕವಿಜೇತ ಶಿವ ಥಾಪಾ (63.5 ಕೆ.ಜಿ), ಸಂಜಯ್ (80 ಕೆ.ಜಿ) ಮತ್ತು ಗೌರವ್ ಚೌಹಾಣ್ (92) ಅವರು ಮಂಗಳವಾರ ಕಣಕ್ಕಿಳಿಯಲಿದ್ದಾರೆ.

ಬಾಕ್ಸಿಂಗ್ ಫೆಡರೇಷನ್ ಆಫ್ ಇಂಡಿಯಾವು ಈ ಟೂರ್ನಿಗೆ 21 ಬಾಕ್ಸರ್‌ಗಳ ತಂಡವನ್ನು ಕಳುಹಿಸಿದೆ. ಕಜಕಸ್ತಾನ, ಚೀನಾ, ಭಾರತ, ಜಪಾನ್ ಮತ್ತು ಉಜ್ಬೇಕಿಸ್ತಾನದ ಸ್ಪರ್ಧಿಗಳು ಕಣದಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.