ADVERTISEMENT

Paris Olympics | ಬಾಕ್ಸಿಂಗ್‌: ಪದಕ ಗೆಲ್ಲುವ ಜರೀನ್ ಕನಸು ಭಗ್ನ

ಪಿಟಿಐ
Published 1 ಆಗಸ್ಟ್ 2024, 13:26 IST
Last Updated 1 ಆಗಸ್ಟ್ 2024, 13:26 IST
ಬಾಕ್ಸಿಂಗ್‌ ಸ್ಪರ್ಧೆಯ ಮಹಿಳೆಯರ 50 ಕೆ.ಜಿ. ವಿಭಾಗದಲ್ಲಿ ಸೆಣಸಾಟದಲ್ಲಿ ತೊಡಗಿರುವ ನಿಖತ್ ಜರೀನ್ (ನೀಲಿ ಜರ್ಸಿ) ಮತ್ತು ಚೀನಾದ ವು ಯು
ಪಿಟಿಐ ಚಿತ್ರ
ಬಾಕ್ಸಿಂಗ್‌ ಸ್ಪರ್ಧೆಯ ಮಹಿಳೆಯರ 50 ಕೆ.ಜಿ. ವಿಭಾಗದಲ್ಲಿ ಸೆಣಸಾಟದಲ್ಲಿ ತೊಡಗಿರುವ ನಿಖತ್ ಜರೀನ್ (ನೀಲಿ ಜರ್ಸಿ) ಮತ್ತು ಚೀನಾದ ವು ಯು ಪಿಟಿಐ ಚಿತ್ರ   

ಪ್ಯಾರಿಸ್‌: ಭಾರತದ ಪದಕದ ಭರವಸೆಯಾಗಿದ್ದ, ಎರಡು ಬಾರಿಯ ವಿಶ್ವ ಚಾಂಪಿಯನ್‌ ನಿಖತ್ ಜರೀನ್ ಅವರು ಒಲಿಂಪಿಕ್ಸ್‌ ಬಾಕ್ಸಿಂಗ್‌ನ (50 ಕೆ.ಜಿ ವಿಭಾಗ) ಅನಿರೀಕ್ಷಿತ ಫಲಿತಾಂಶದಲ್ಲಿ ಚೀನಾದ ವು ಯು ಅವರಿಗೆ 0–5 ಅಂತರದಲ್ಲಿ ಮಣಿದರು. ಗುರುವಾರ ಬೆಳಿಗ್ಗೆ ನಡೆದ 16ರ ಸುತ್ತಿನ ಈ ಪಂದ್ಯ ನಿರೀಕ್ಷೆ ಮೀರಿ ಏಕಪಕ್ಷೀಯವಾಯಿತು.

ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯು (ಐಒಸಿ), ಅಂತರರಾಷ್ಟ್ರೀಯ ಬಾಕ್ಸಿಂಗ್ ಸಂಸ್ಥೆಗೆ ಮಾನ್ಯತೆ ನೀಡಿಲ್ಲ. ಹೀಗಾಗಿ ಐಒಸಿಯೇ ಬಾಕ್ಸಿಂಗ್ ಸ್ಪರ್ಧೆ ನಡೆಸುತ್ತಿದ್ದು, ನಿಖತ್‌ ಇಲ್ಲಿ ಶ್ರೇಯಾಂಕರಹಿತ ಬಾಕ್ಸರ್ ಆಗಿದ್ದರು.

ಆದರೆ ಏಷ್ಯನ್‌ ಗೇಮ್ಸ್‌ ಸ್ವರ್ಣ ವಿಜೇತೆ ಎದುರು ಗುರುವಾರ ನಡೆದ ಈ ಹೋರಾಟದಲ್ಲಿ ಜರೀನ್ ಕನಸು ಜರ್ಜರಿತಗೊಂಡಿತು. ‘ನನ್ನನ್ನು ಕ್ಷಮಿಸಿ’ ಎಂದು ಪಂದ್ಯದ ನಂತರ ಭಾವೊದ್ವೇಗದಿಂದ ಅವರು ಹೇಳಿದರು. ‘ಇದು ನನಗೆ ಕಲಿಕೆಯ ಅನುಭವ. ಈ ಹಿಂದೆ ಆಕೆಯ ಜೊತೆ ನಾನು ಎಂದೂ ಸೆಣಸಾಡಿಲ್ಲ. ಅವರು ತುಂಬಾ ವೇಗವಾಗಿದ್ದರು. ಊರಿಗೆ ಹೋದ ನಂತರ ಈ ಬಗ್ಗೆ ಸೆಣಸಾಟದಲ್ಲಿ ಎಲ್ಲಿ ಎಡವಿದ್ದೇನೆಂದು ವಿಶ್ಲೇಷಣೆ ನಡೆಸುವೆ’ ಎಂದರು.

ADVERTISEMENT

‘ನಾನು ಶ್ರೇಯಾಂಕರಹಿತಳಾಗಿದ್ದು, ಇದು ನನಗೆ ಮೊದಲ ಪಂದ್ಯವೇನೂ ಆಗಿರಲಿಲ್ಲ. ಆಕೆಗೆ ಇದು ಮೊದಲ ಪಂದ್ಯ. ಇದೂ ಕೂಡ ಗಣನೆಗೆ ಬರುತ್ತದೆ’ ಎಂದು 28 ವರ್ಷದ ನಿಖತ್ ಹೇಳಿದರು.

‘ನಾನು ತುಂಬಾ ಶ್ರಮ ಹಾಕಿದ್ದೆ. ಈ ಒಲಿಂಪಿಕ್ಸ್‌ಗೆಂದು ದೈಹಿಕ ಮತ್ತು ಮಾನಸಿಕವಾಗಿ ಸಜ್ಜಾಗಿದ್ದೆ. ಗಟ್ಟಿ ಮನೋಬಲದೊಡನೆ ಮತ್ತೆ ಮರಳುವೆ’ ಎಂದರು.

ಮೊದಲ ಬಾರಿ ಇವರಿಬ್ಬರ ನಡುವಿನ ಸೆಣಸಾಟದಲ್ಲಿ ನಿಖತ್‌ ಅವರನ್ನು ಹಾಲಿ ಫ್ಲೈವೇಟ್‌ (52 ಕೆ.ಜಿ) ವಿಶ್ವ ಚಾಂಪಿಯನ್‌ ಆಟಗಾರ್ತಿ ಮೊದಲ ಸುತ್ತಿನಿಂದಲೇ ಒತ್ತಡಕ್ಕೆ ಸಿಲುಕಿಸಿದರು. ಯು ಅವರು ಚುರುಕಿನ ಪ್ರಹಾರಗಳನ್ನು ನೀಡಿದರು. ನಿಖತ್ ಪ್ರತಿಹೋರಾಟಕ್ಕೆ ಯತ್ನಿಸಿದರೂ, ಅವರಿಗೆ ಸಮನ್ವಯ ಸಾಧಿಸಲಾಗಲಿಲ್ಲ. ಇದಕ್ಕೆ ಯು ಅವರ ಮಿಂಚಿನ ಪಾದಚಲನೆ ಕಾರಣವಾಯಿತು. ಗುದ್ದುಗಳನ್ನು ಅವರು ಸುಲಭವಾಗಿ ತಪ್ಪಿಸಿಕೊಂಡರು.

ಎರಡನೆ ಸುತ್ತಿನಲ್ಲಿ ಸ್ವಲ್ಪ ಯಶಸ್ಸು ಕಂಡರು. ನಿಖತ್ ಕೆಲವು ಪ್ರಹಾರಗಳನ್ನು ನೀಡುವಲ್ಲಿ ಯಶಸ್ವಿ ಆದರೂ, ಯು ಕೂಡ ನಂತರ ಪ್ರತಿದಾಳಿಯಲ್ಲಿ ನಿಖತ್ ಅವರ ಮುಖಕ್ಕೆ ಪ್ರಹಾರ ನಡೆಸಿದರು. ಮೂರನೇ ಸುತ್ತಿನಲ್ಲೂ ಅಂಥ ಬದಲಾವಣೆ ಕಾಣಲಿಲ್ಲ.

ಒಲಿಂಪಿಕ್ಸ್‌ ಕುಸ್ತಿಯಿಂದ ಹೊರಬಿದ್ದ ನಾಲ್ಕನೇ ಬಾಕ್ಸರ್ ಎನಿಸಿದರು. ಆರು ಮಂದಿಯ ಭಾರತ ಬಾಕ್ಸಿಂಗ್ ತಂಡ ಇಲ್ಲಿಗೆ ಬಂದಿತ್ತು. ಅಮಿತ್‌ ಪಂಘಲ್ (51 ಕೆ.ಜಿ), ಕಾಮನ್ವೆಲ್ತ್‌ ಗೇಮ್ಸ್‌ ಕಂಚಿನ ಪದಕ ವಿಜೇತೆ ಜೈಸ್ಮಿನ್‌ ಲಂಬೊರಿಯಾ (57 ಕೆ.ಜಿ), ಏಷ್ಯನ್ ಗೇಮ್ಸ್‌ ಕಂಚಿನ ಪದಕ ವಿಜೇತೆ ಪ್ರೀತಿ ಪವಾರ್ (54 ಕೆ.ಜಿ) ಈಗಾಗಲೇ ಹೊರಬಿದ್ದಿದ್ದಾರೆ.

ಲವ್ಲಿನಾ ಬೊರ್ಗೊಹೈನ್ (75 ಕೆ.ಜಿ) ಮತ್ತು ನಿಶಾಂತ್ ದೇವ್ (75 ಕೆ.ಜಿ) ಅವರಿಬ್ಬರು ಇನ್ನು ಒಂದು ಪಂದ್ಯ ಗೆದ್ದರೆ ಕನಿಷ್ಠ ಕಂಚಿನ ಪದಕವಂತೂ ಖಚಿತವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.