ಪ್ಯಾರಿಸ್: ಪ್ಯಾರಾಲಿಂಪಿಕ್ಸ್‌ನ ಪುರುಷರ ಹೈಜಂಪ್ ಟಿ–47 ವಿಭಾಗದಲ್ಲಿ ಭಾರತದ ನಿಶಾದ್ ಕುಮಾರ್ ಬೆಳ್ಳಿ ಪದಕ ಗೆದ್ದಿದ್ದಾರೆ.
ಟೊಕಿಯೊ ಒಲಿಂಪಿಕ್ಸ್‌ನಲ್ಲಿ ಇದೇ ವಿಭಾಗದಲ್ಲಿ ಬೆಳ್ಳಿ ಪದಕ ಜಯಿಸಿದ ನಿಶಾದ್, ಹಾಲಿ ಋತುವಿನಲ್ಲಿ 2.04 ಮೀಟರ್ ಎತ್ತರಕ್ಕೆ ಜಿಗಿದು ಬೆಳ್ಳಿಗೆ ತೃಪ್ತಿಪಟ್ಟುಕೊಂಡಿದ್ದಾರೆ.
ಅಮೆರಿಕದ ರೊಡೆರಿಕ್ ಟೌನ್ಸೆಂಡ್ 2.12 ಮೀಟರ್ ಎತ್ತರಕ್ಕೆ ಜಿಗಿದು ಚಿನ್ನದ ಪದಕ ಗೆದ್ದುಕೊಂಡರೆ, ಜಾರ್ಜಿ ಮಾರ್ಗೀವ್ (2.00 ಮೀಟರ್) ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.
ಈ ಬಾರಿಯ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ ಪದಕಗಳ ಸಂಖ್ಯೆ 7ಕ್ಕೆ (1 ಚಿನ್ನ, 2 ಬೆಳ್ಳಿ, 4 ಕಂಚು) ಏರಿಕೆಯಾಗಿದೆ. ಪದಕ ಪಟ್ಟಿಯಲ್ಲಿ ಭಾರತ 27ನೇ ಸ್ಥಾನದಲ್ಲಿದೆ.
ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನ 200 ಮೀಟರ್ ಓಟದಲ್ಲಿ (ಟಿ35 ವಿಭಾಗ) ಭಾರತದ ಪ್ರೀತಿ ಪಾಲ್ ಅವರು ಕಂಚಿನ ಪದಕ ಜಯಿಸಿದ್ದಾರೆ. ಭಾನುವಾರ ನಡೆದ ಸ್ಪರ್ಧೆಯಲ್ಲಿ ಅವರು 30.01 ಸೆಕೆಂಡ್‌ಗಳಲ್ಲಿ ವೈಯಕ್ತಿಕ ಶ್ರೇಷ್ಠ ಸಮಯದೊಂದಿಗೆ ಗುರಿ ತಲುಪಿದರು. ಈ ಮೂಲಕ ಪ್ರೀತಿ, ಟ್ರ್ಯಾಕ್ ಮತ್ತು ಫೀಲ್ಡ್‌ನಲ್ಲಿ ಎರಡು ಪದಕಗಳನ್ನು ಗೆದ್ದ ಭಾರತದ ಮೊದಲ ಮಹಿಳಾ ಅಥ್ಲೀಟ್ ಎಂಬ ಹೆಗ್ಗಳಿಕೆಗೆ ಪಾತ್ರವಾದರು. 23 ವರ್ಷ ವಯಸ್ಸಿನ ಪ್ರೀತಿ ಶುಕ್ರವಾರ ಮಹಿಳೆಯರ 100 ಮೀಟರ್ ಓಟದಲ್ಲೂ ಕಂಚಿನ ಪದಕ ಗೆದ್ದಿದ್ದರು.
ಅಭಿನಂದನೆ ಸಲ್ಲಿಸಿದ ಪ್ರಧಾನಿ, ರಾಷ್ಟ್ರಪತಿ: ನಿಶಾದ್ ಕುಮಾರ್ ಹಾಗೂ ಪ್ರೀತಿ ಪಾಲ್ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ದ್ರೌಪದಿ ಮುರ್ಮು 'ಎಕ್ಸ್' ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.
ಪ್ರೀತಿ ಪಾಲ್ ಸಾಧನೆಗೆ ದೇಶ ಹೆಮ್ಮೆಪಡುತ್ತದೆರಾಷ್ಟ್ರಪತಿ ದ್ರೌಪದಿ ಮುರ್ಮು
'ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನಲ್ಲಿ ಹೈಜಂಪ್‌ನಲ್ಲಿ ಬೆಳ್ಳಿ ಪದಕ ಗೆದ್ದ ನಿಶಾದ್ ಕುಮಾರ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಅವರ ಸಾಧನೆ ದೇಶದ ಕ್ರೀಡಾಪಟುಗಳಿಗೆ ಸ್ಪೂರ್ತಿ. ಅವರು ನಿರಂತರವಾಗಿ ಯಶಸ್ಸು ಪಡೆಯಲಿ ಎಂದು ನಾನು ಹಾರೈಸುತ್ತೇನೆ' ಎಂದು ಮುರ್ಮು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಪ್ಯಾರಾಲಿಂಪಿಕ್ಸ್-2024ರಲ್ಲಿ ಎರಡು ಪದಕ ಗೆಲ್ಲುವ ಮೂಲಕ ಪ್ರೀತಿ ಪಾಲ್ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಭಾರತೀಯರಿಗೆ ಅವರು ಸ್ಫೂರ್ತಿ. ಅವರ ಪರಿಶ್ರಮ ಅದ್ವಿತೀಯಪ್ರಧಾನಿ ನರೇಂದ್ರ ಮೋದಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.