ADVERTISEMENT

ಚೆಸ್ ಟೂರ್ನಿ | ಲಕ್ಷಿತ್‌ ಸೇರಿ ನಾಲ್ವರಿಗೆ ಮುನ್ನಡೆ

​ಪ್ರಜಾವಾಣಿ ವಾರ್ತೆ
Published 29 ಜೂನ್ 2024, 15:14 IST
Last Updated 29 ಜೂನ್ 2024, 15:14 IST
<div class="paragraphs"><p>ಲಕ್ಷಿತ್ ಸಾಲ್ಯಾನ್‌</p></div>

ಲಕ್ಷಿತ್ ಸಾಲ್ಯಾನ್‌

   

ಪಡುಬಿದ್ರಿ (ಉಡುಪಿ ಜಿಲ್ಲೆ): ಮಂಗಳೂರಿನ ಲಕ್ಷಿತ್ ಸಾಲ್ಯಾನ್‌, ತಮಿಳುನಾಡಿನ ಆಕಾಶ್‌ ಜಿ, ಎಸ್‌.ಎ ಕಣ್ಣನ್ ಮತ್ತು ತೆಲಂಗಾಣದ ರಾಮಕೃಷ್ಣ ಜೆ ಇಲ್ಲಿ ಶನಿವಾರ ಆರಂಭಗೊಂಡ ರಾಷ್ಟ್ರಮಟ್ಟದ ಫಿಡೆ ರೇಟೆಡ್ ರ‍್ಯಾಪಿಡ್ ಚೆಸ್ ಟೂರ್ನಿಯ ಮುಕ್ತ ವಿಭಾಗದಲ್ಲಿ ಅಗ್ರಸ್ಥಾನ ಹಂಚಿಕೊಂಡರು.

ಶ್ರೀ ನಾರಾಯಣಗುರು ಸ್ಕೂಲ್ ಆಫ್ ಚೆಸ್‌ ಸಂಸ್ಥೆಯ ಉಡುಪಿ ಮತ್ತು ಕಾಪು ಘಟಕ, ಕಾಪು ಹಳೆ ಮಾರಿಯಮ್ಮ ಸಭಾಭವನದಲ್ಲಿ ಆಯೋಜಿಸಿರುವ ಟೂರ್ನಿಯ ಮೊದಲ ದಿನದ ಆರು ಸುತ್ತುಗಳ ಮುಕ್ತಾಯಕ್ಕೆ ಈ ನಾಲ್ವರು ತಲಾ ಆರು ಪಾಯಿಂಟ್ ಕಲೆ ಹಾಕಿದರು. ಉತ್ತಮ ಟೈ ಬ್ರೇಕರ್ ಆಧಾರದಲ್ಲಿ ಆಕಾಶ್‌ ಮೊದಲ ಸ್ಥಾನ ಮತ್ತು ಲಕ್ಷಿತ್ ಎರಡನೇ ಸ್ಥಾನದಲ್ಲಿದ್ದಾರೆ. 

ADVERTISEMENT

ಅಗ್ರ ಶ್ರೇಯಾಂಕಿತ ಕೇರಳದ ನಿತಿನ್ ಬಾಬು ಮತ್ತು ಟೂರ್ನಿಯಲ್ಲಿ ಆಡುತ್ತಿರುವ ಏಕೈಕ ಇಂಟರ್‌ನ್ಯಾಷನಲ್ ಮಾಸ್ಟರ್‌ ಮಂಗಳೂರಿನ ಶರಣ್ ರಾವ್, ಉಡುಪಿಯ ನಿಶಾಂತ್ ಡಿಸೋಜ ಮತ್ತು ಮಹಾರಾಷ್ಟ್ರದ ಸಾಹು ವಿಕ್ರಮಾದಿತ್ಯ ತಲಾ 5.5 ಪಾಯಿಂಟ್ ಗಳಿಸಿದ್ದಾರೆ. 

2040 ರೇಟಿಂಗ್ ಪಾಯಿಂಟ್ಸ್ ಹೊಂದಿರುವ ಆಕಾಶ್‌ಗೆ ಎಲ್ಲ ಸುತ್ತುಗಳಲ್ಲೂ ತಮಗಿಂತ ಕಡಿಮೆ ರೇಟಿಂಗ್‌ನ ಆಟಗಾರರು ಮುಖಾಮುಖಿಯಾಗಿದ್ದರು. ಲಕ್ಷಿತ್ (1812) ಕೂಡ ತಮಗಿಂತ ಕಡಿಮೆ ರೇಟಿಂಗ್‌ನ ಆಟಗಾರರನ್ನು ಮಣಿಸಿದರು. ಭಾನುವಾರ ಬೆಳಿಗ್ಗೆ  ಇವರಿಬ್ಬರು ಮುಖಾಮುಖಿಯಾಗಲಿದ್ದಾರೆ.

ನಿತಿನ್ ಬಾಬು (2142) ಐದನೇ ಸುತ್ತಿನಲ್ಲಿ ಗೋವಾದ ಋಷಿಕೇಶ್ ಪರಬ್‌ ಜೊತೆ ಡ್ರಾ ಮಾಡಿಕೊಂಡರು. ನಿಶಾಂತ್‌ (1665) ಮತ್ತು ಶರಣ್ ರಾವ್ ನಡುವಿನ ನಾಲ್ಕನೇ ಸುತ್ತು ತೀವ್ರ ಕುತೂಹಲ ಕೆರಳಿಸಿತ್ತು. ಈ ಪಂದ್ಯದಲ್ಲಿ ಡ್ರಾ ಸಾಧಿಸುವ ಮೂಲಕ ನಿಶಾಂತ್‌ ಗಮನ ಸೆಳೆದರು. ನಿಶಾಂತ್ ಸೋಮವಾರ ಬೆಳಿಗ್ಗೆ ನಿತಿನ್ ವಿರುದ್ಧ ಆಡಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.