ಪ್ಯಾರಿಸ್: ರಿಲಯನ್ಸ್ ಫೌಂಡೇಷನ್ ಅಧ್ಯಕ್ಷೆ ನೀತಾ ಅಂಬಾನಿ ಅವರು ಪ್ಯಾರಿಸ್ ಒಲಿಂಪಿಕ್ಸ್‌ಗೆ ಮುನ್ನ ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ಸದಸ್ಯೆಯಾಗಿ ಬುಧವಾರ ಅವಿರೋಧವಾಗಿ ಮರು ಆಯ್ಕೆಯಾಗಿದ್ದಾರೆ.
ಇಲ್ಲಿ ನಡೆದ 142ನೇ ಐಒಸಿ ಅಧಿವೇಶನದಲ್ಲಿ ನೀತಾ ಅವರು ಶೇ 100ರಷ್ಟು ಮತಗಳನ್ನು ಪಡೆದು ಸರ್ವಾನುಮತದಿಂದ ಆಯ್ಕೆಯಾದರು.
‘ಐಒಸಿ ಸದಸ್ಯೆಯಾಗಿ ಮತ್ತೆ ಆಯ್ಕೆ ಮಾಡಿರುವುದು ನನಗೆ ಸಿಕ್ಕ ದೊಡ್ಡ ಗೌರವವಾಗಿದೆ. ನನ್ನ ಮೇಲೆ ಇಟ್ಟ ನಂಬಿಕೆ ಮತ್ತು ವಿಶ್ವಾಸಕ್ಕಾಗಿ ಐಒಸಿ ಅಧ್ಯಕ್ಷರಿಗೆ (ಥಾಮಸ್) ಮತ್ತು ಎಲ್ಲ ಸಹೋದ್ಯೋಗಿಗಳಿಗೆ ಕೃತಜ್ಞತೆಗಳು. ನನ್ನ ಮರು ಆಯ್ಕೆಯು ಜಾಗತಿಕ ಕ್ರೀಡಾ ಕ್ಷೇತ್ರದಲ್ಲಿ ಭಾರತದ ಪ್ರಭಾವವನ್ನು ತೋರಿಸುತ್ತದೆ. ಈ ಸಂತೋಷ ಮತ್ತು ಹೆಮ್ಮೆಯ ಕ್ಷಣವನ್ನು ಪ್ರತಿ ಭಾರತೀಯರೊಂದಿಗೆ ಹಂಚಿಕೊಳ್ಳುವುದಕ್ಕೆ ಬಯಸುತ್ತೇನೆ. ಭಾರತವೂ ಒಳಗೊಂಡಂತೆ ವಿಶ್ವದಾದ್ಯಂತ ಒಲಿಂಪಿಕ್ ಸಂಭ್ರಮವನ್ನು ಹೆಚ್ಚಿಸಲು ಪ್ರಯತ್ನಿಸುತ್ತೇನೆ’ ಎಂದು ನೀತಾ ಅಂಬಾನಿ ಪ್ರತಿಕ್ರಿಯಿಸಿದ್ದಾರೆ.
2016ರಲ್ಲಿ ರಿಯೊ ಒಲಿಂಪಿಕ್ಸ್ ವೇಳೆ ನೀತಾ ಅವರು ಐಒಸಿ ಸದಸ್ಯೆಯಾಗಿ ಆಯ್ಕೆಯಾಗಿದ್ದರು. ಐಒಸಿ ಮಂಡಳಿಗೆ ಸೇರಿದ್ದ ಭಾರತದ ಮೊದಲ ಮಹಿಳೆ ಅವರಾಗಿದ್ದಾರೆ. ನೀತಾ ಅವರ ಮುಂದಾಳತ್ವದಲ್ಲಿ ಐಒಸಿ ವಾರ್ಷಿಕ ಸಭೆಯ ಆತಿಥ್ಯವನ್ನು ಭಾರತ ಕಳೆದ ವರ್ಷ ಪಡೆದುಕೊಂಡಿತ್ತು. ಮುಂಬೈನ ಜಿಯೊ ವರ್ಲ್ಡ್ ಸೆಂಟರ್‌ನಲ್ಲಿ ಆ ಸಭೆಯು ಯಶಸ್ವಿಯಾಗಿ ನಡೆದಿತ್ತು.
ಭಾರತ ಒಲಿಂಪಿಕ್ ಸಂಸ್ಥೆ ಜೊತೆಗಿನ ದೀರ್ಘಾವಧಿಯ ಪಾಲುದಾರಿಕೆಯ ಭಾಗವಾಗಿ ರಿಲಯನ್ಸ್ ಫೌಂಡೇಷನ್ ಮೂಲಕ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ‘ಇಂಡಿಯಾ ಹೌಸ್’ ಅನ್ನು ತೆರೆಯಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.