ಮಂಗಳೂರು: ನಿಟ್ಟೆ ವಿಶ್ವವಿದ್ಯಾಲಯ ಮತ್ತು ಕಾರ್ಕಳದ ನಿಟ್ಟೆ ಕ್ಯಾಂಪಸ್ ತಂಡಗಳು ಮಂಗಳೂರು ಬ್ಯಾಸ್ಕೆಟ್‌ಬಾಲ್ ಕ್ಲಬ್ ಆಯೋಜಿಸಿರುವ ಜೇಮ್ಸ್ ನೈಸ್ಮಿತ್ ಕಪ್ ಬ್ಯಾಸ್ಕೆಟ್‌ಬಾಲ್ ಟೂರ್ನಿಯ ಕಾಲೇಜು ವಿಭಾಗದ ಪುರುಷರ ಫೈನಲ್‌ನಲ್ಲಿ ಸೆಣಸಲಿವೆ.
ದಕ್ಷಿಣ ಕನ್ನಡ ಜಿಲ್ಲಾ ಬ್ಯಾಸ್ಕೆಟ್‌ಬಾಲ್ ಸಂಸ್ಥೆಯ ಸಹಯೋಗದಲ್ಲಿ ನಗರದ ಯು.ಎಸ್.ಮಲ್ಯ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟೂರ್ನಿಯ 3ನೇ ದಿನವಾದ ಶುಕ್ರವಾರ ಸೆಮಿಫೈನಲ್‌ನಲ್ಲಿ ನಿಟ್ಟೆ ಕ್ಯಾಂಪಸ್ ತಂಡ ಎನ್‌ಐಟಿಕೆ ವಿರುದ್ಧ 40–34ರಲ್ಲಿ ಜಯ ಗಳಿಸಿತು. ನಾಲ್ಕರ ಘಟ್ಟದ ಮತ್ತೊಂದು ಪಂದ್ಯದಲ್ಲಿ ನಿಟ್ಟೆ ವಿವಿ ತಂಡ ಗೋವಾದ ಬಿಟ್ಸ್ ವಿರುದ್ಧ 32–18ರಲ್ಲಿ ಗೆದ್ದಿತು.
ಮೊದಲ ಸೆಮಿಫೈನಲ್ ಜಿದ್ದಾಜಿದ್ದಿಯ ಹೋರಾಟಕ್ಕೆ ಸಾಕ್ಷಿಯಾಯಿತು. ಮೊದಲಾರ್ಧದಲ್ಲಿ 16–20ರ ಹಿನ್ನಡೆಯಲ್ಲಿದ್ದ ನಿಟ್ಟೆ ಕ್ಯಾಂಪಸ್ ನಂತರ ಚೇತರಿಕೆಯ ಆಟವಾಡಿತು. ಕ್ರಮವಾಗಿ 16 ಮತ್ತು 11 ಪಾಯಿಂಟ್ ಗಳಿಸಿದ ಆಯುಷ್ ಮತ್ತು ವಿನೀತ್ ಅವರ ಅಮೋಘ ಆಟದ ಬಲದಿಂದ ಎದುರಾಳಿ ತಂಡವನ್ನು ನಿಯಂತ್ರಿಸುವಲ್ಲಿ ತಂಡ ಯಶಸ್ವಿಯಾಯಿತು. ಎನ್ಐಟಿಕೆ ಪರವಾಗಿ ರಿಷಿತ್ 11 ಮತ್ತು ಸ್ವರಾಜ್ 10 ಪಾಯಿಂಟ್ ಕಲೆ ಹಾಕಿದರು.
ನಿಟ್ಟೆ ವಿವಿ ಮತ್ತು ಬಿಟ್ಸ್ ನಡುವಿನ ಪಂದ್ಯ ಏಕಪಕ್ಷೀಯವಾಗಿತ್ತು. ವಾಸಿಫ್ ಮತ್ತು ಅಶುತೋಷ್ ತಲಾ 13 ಪಾಯಿಂಟ್ ಗಳಿಸಿ ನಿಟ್ಟೆ ವಿವಿಗೆ ಸುಲಭ ಜಯ ತಂದುಕೊಟ್ಟರು.
ಕೇಂಬ್ರಿಜ್‌ಗೆ 3ನೇ ಸ್ಥಾನ
ಹೈಸ್ಕೂಲ್ ಬಾಲಕಿಯರ ವಿಭಾಗದ ಸೆಮಿಫೈನಲ್‌ನಲ್ಲಿ ಮೌಂಟ್ ಕಾರ್ಮೆಲ್ ತಂಡ 8–4ರಲ್ಲಿ ಕೇಂಬ್ರಿಜ್ ತಂಡವನ್ನು, ಸೇಂಟ್ ತೆರೆಸಾ 11–3ರಲ್ಲಿ ಮಣಿಪಾಲ ತಂಡವನ್ನು ಮಣಿಸಿತು. 3ನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಕೇಂಬ್ರಿಜ್ 16–10ರಲ್ಲಿ ಮಣಿಪಾಲ ತಂಡವನ್ನು ಸೋಲಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.