ADVERTISEMENT

ನಾರ್ವೆ ಚೆಸ್‌ ಟೂರ್ನಿ: ನಕಾಮುರಾ ವಿರುದ್ಧ ಗೆದ್ದ ಪ್ರಜ್ಞಾನಂದ

ಪಿಟಿಐ
Published 8 ಜೂನ್ 2024, 14:10 IST
Last Updated 8 ಜೂನ್ 2024, 14:10 IST
<div class="paragraphs"><p>ಪ್ರಜ್ಞಾನಂದ </p></div>

ಪ್ರಜ್ಞಾನಂದ

   

ಪಿಟಿಐ

ಸ್ಟಾವೆಂಜರ್ (ನಾರ್ವೆ): ಭಾರತದ ಆರ್‌.ಪ್ರಜ್ಞಾನಂದ, ಅಮೆರಿಕದ ಹಿಕಾರು ನಕಾಮುರಾ ವಿರುದ್ಧ ಗೆಲುವಿನ ಮೂಲಕ ನಾರ್ವೆ ಚೆಸ್‌ ಟೂರ್ನಿಯಲ್ಲಿ ಅಭಿಯಾನ ಅಂತ್ಯಗೊಳಿಸಿದರು. ವಿಶ್ವದ ಅಗ್ರಮಾನ್ಯ ಆಟಗಾರ ಮ್ಯಾಗ್ನಸ್‌ ಕಾರ್ಲ್‌ಸನ್‌ ಅವರು ನಿರೀಕ್ಷೆಯಂತೆ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದುಕೊಂಡರು.

ADVERTISEMENT

ಅಂತಿಮ (10ನೇ) ಸುತ್ತಿನಲ್ಲಿ ಅಮೆರಿಕದ ಫ್ಯಾಬಿಯಾನೊ ಕರುವಾನಾ ಅವರನ್ನು ಸೋಲಿಸಿದ ಕಾರ್ಲ್‌ಸನ್‌ 17.5 ಪಾಯಿಂಟ್‌ಗಳೊಡನೆ ಅಗ್ರಸ್ಥಾನ ಪಡೆದರು. ಸುಮಾರು ₹54 ಲಕ್ಷ ಬಹುಮಾನ ಅವರದಾಯಿತು. ಈ ವಿಭಿನ್ನ ಟೂರ್ನಿಯಲ್ಲಿ ನಿಗದಿತ ಅವಧಿಯಿರುವ ಕ್ಲಾಸಿಕಲ್‌ ಮಾದರಿಯ ಪಂದ್ಯ ‘ಡ್ರಾ’ ಆದಲ್ಲಿ, ಅತ್ಯಲ್ಪ ಅವಧಿಯ ಆರ್ಮ್‌ಗೆಡನ್‌ ಮೂಲಕ ಫಲಿತಾಂಶ ನಿರ್ಧರಿಸಲಾಗುತ್ತದೆ.

ಅಂತಿಮ ಸುತ್ತಿನಲ್ಲಿ ಪ್ರಜ್ಞಾನಂದ ಎದುರು 1.5–1 ಅಂತರದಲ್ಲಿ ಸೋತರೂ ನಕಾಮುರಾ ಅವರು 15.5 ಪಾಯಿಂಟ್ಸ್‌ ಪಡೆದು ಎರಡನೇ ಸ್ಥಾನ ಉಳಿಸಿಕೊಂಡರು. ಪ್ರಜ್ಞಾನಂದ ಅವರು 14.5 ಪಾಯಿಂಟ್‌ಗಳೊಡನೆ ಮೂರನೇ ಸ್ಥಾನದಲ್ಲಿ ಸ್ಪರ್ಧೆ ಮುಗಿಸಿದರು.

ಪ್ರಜ್ಞಾನಂದ ಸಾಧನೆ:

ಚೆನ್ನೈ ಆಟಗಾರನ ಪಾಲಿಗೆ ತೃಪ್ತಿಯ ವಿಷಯವೆಂದರೆ ಅವರು ಈ ಅತಿ ಪ್ರಬಲ ಟೂರ್ನಿಯಲ್ಲಿ ವಿಶ್ವದ ಮೊದಲ ಮೂವರು ಅಗ್ರಮಾನ್ಯ ಆಟಗಾರನನ್ನು ಸೋಲಿಸಿದ್ದು. ಅವರು ಮೂವರು ಅಗ್ರಮಾನ್ಯ ಆಟಗಾರನನ್ನು ಸೋಲಿಸಿದ ಮೊದಲ ಆಟಗಾರ ಎಂಬ ಶ್ರೇಯಕ್ಕೂ ಪಾತ್ರರಾದರು. ಈ ಹಿಂದಿನ ಸುತ್ತುಗಳಲ್ಲಿ ಅವರು ಕಾರ್ಲ್‌ಸನ್‌ ಮತ್ತು ಕರುವಾನ ಅವರನ್ನು ಕ್ಲಾಸಿಕಲ್‌ ಮಾದರಿಯಲ್ಲೇ (ಟೈಮ್‌ ಕಂಟ್ರೋಲ್‌) ಸೋಲಿಸಿದ್ದರು.

ಇರಾನ್‌ ಸಂಜಾತ ಫ್ರಾನ್ಸ್‌ನ ಆಟಗಾರ ಅಲಿರೇಝಾ ಫೀರೋಜ್ (13.5) ನಾಲ್ಕನೇ ಸ್ಥಾನ ಪಡೆದರು. ಅವರು ವಿಶ್ವ ಚಾಂಪಿಯನ್ ಡಿಂಗ್ ಲಿರೆನ್ ಅವರನ್ನು ಸೋಲಿಸಿದರು. ಕರುವಾನಾ (11.5) ಐದನೇ ಮತ್ತು ಚೀನಾದ ಲಿರೆನ್‌ (7) ಅಂತಿಮ ಸ್ಥಾನ ಗಳಿಸಿದರು.

ಮಹಿಳಾ ವಿಭಾಗದ ಅಂತಿಮ ಸುತ್ತಿನಲ್ಲಿ ವೆನ್‌ಜುನ್‌ ಜು ಸ್ವದೇಶದ ಟಿಂಗ್ಜಿ ಲೀ ಅವರನ್ನು ಸೋಲಿಸಿ ಒಟ್ಟು 19 ಪಾಯಿಂಟ್‌ಗಳೊಡನೆ ಅಗ್ರಸ್ಥಾನ ಗಳಿಸಿದರು. ಮೂರು ಪಂದ್ಯಗಳನ್ನು ಅವರು ಕ್ಲಾಸಿಕಲ್‌ ಮಾದರಿಯಲ್ಲೇ ಗೆದ್ದರು.

ಅನ್ನಾ ಮುಝಿಚುಕ್ (16) ಎರಡನೇ ಸ್ಥಾನ ಗಳಿಸಿದರು. ಟಿಂಗ್ಜಿ (14.5) ಮೂರನೇ ಸ್ಥಾನ ಗಳಿಸಿದರು. ಅನ್ನಾ ಅಂತಿಮ ಸುತ್ತಿನಲ್ಲಿ ಕೋನೇರು ಹಂಪಿ (10 ಪಾಯಿಂಟ್ಸ್‌) ಅವರನ್ನು ಮಣಿಸಿದರು. ಸ್ವೀಡನ್‌ನ ಪಿಯಾ ಕ್ರಾಮ್ಲಿಂಗ್ ಅವರನ್ನು ಮಣಿಸಿ ಆರ್‌.ವೈಶಾಲಿ (12.5 ಪಾಯಿಂಟ್ಸ್) ನಾಲ್ಕನೇ ಸ್ಥಾನ ಗಳಿಸಿದರೆ, ಹಂಪಿ ಐದನೇ ಹಾಗೂ ಕ್ಲಾಮ್ಲಿಂಗ್ (8) ಕ್ರಮವಾಗಿ ಐದು ಮತ್ತು ಆರನೇ ಸ್ಥಾನ ಗಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.