ADVERTISEMENT

ನಾರ್ವೆ ಚೆಸ್‌: ಪ್ರಜ್ಞಾನಂದ, ವೈಶಾಲಿಗೆ ಸೋಲು

ಪಿಟಿಐ
Published 4 ಜೂನ್ 2024, 0:36 IST
Last Updated 4 ಜೂನ್ 2024, 0:36 IST
ಪ್ರಜ್ಞಾನಂದ
ಪ್ರಜ್ಞಾನಂದ   

ಸ್ಟೆವೆಂಜರ್, ನಾರ್ವೆ: ಭಾರತದ ಗ್ರ್ಯಾಂಡ್‌ಮಾಸ್ಟರ್‌ಗಳಾದ ಆರ್. ಪ್ರಜ್ಞಾನಂದ ಮತ್ತು ಅವರ ಅಕ್ಕ ಆರ್. ವೈಶಾಲಿ ಅವರು ಇಲ್ಲಿ ನಡೆಯುತ್ತಿರುವ ನಾರ್ವೆ ಚೆಸ್‌ ಟೂರ್ನಿಯಲ್ಲಿ ಸೋಮವಾರ ತಮ್ಮ ವಿಭಾಗದಲ್ಲಿ ಸೋಲು ಕಂಡರು.

ಪ್ರಜ್ಞಾನಂದ ಅವರ ಗೆಲುವಿನ ಓಟಕ್ಕೆ ಫ್ರಾನ್ಸ್‌ನ ಫಿರೋಜಾ ಅಲಿರೆಜಾ ಬ್ರೇಕ್‌ ಹಾಕಿದರು. ಈ ಹಿಂದಿನ ಸುತ್ತಿಗಳಲ್ಲಿ ವಿಶ್ವದ ಅಗ್ರಮಾನ್ಯ ಆಟಗಾರ ಮ್ಯಾಗ್ನಸ್ ಕಾರ್ಲಸನ್ ಮತ್ತು ಎರಡನೇ ಶ್ರೇಯಾಂಕದ ಫ್ಯಾಬಿಯಾನೊ ಕರುವಾನಾ ಅವರಿಗೆ ಪ್ರಜ್ಞಾನಂದ ಆಘಾತ ನೀಡಿದ್ದರು. ಪ್ರಸ್ತುತ ಭಾರತದ ಆಟಗಾರ 10 ಪಾಯಿಂಟ್ಸ್‌ಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ.

ಒಟ್ಟು ₹1.33 ಕೋಟಿ ಬಹುಮಾನ ಮೊತ್ತವನ್ನು ಹೊಂದಿರುವ ಟೂರ್ನಿಯಲ್ಲಿ ಆರು ಆಟಗಾರರ ಡಬಲ್ ರೌಂಡ್ ರಾಬಿನ್ ಸ್ಪರ್ಧೆಯಲ್ಲಿ ಕಾರ್ಲಸನ್ (12 ಪಾಯಿಂಟ್ಸ್‌) ಮುಂಚೂಣಿಯಲ್ಲಿದ್ದಾರೆ. ಅವರು ಚೀನಾದ ಡಿಂಗ್ ಲಿರೆನ್ ಅವರನ್ನು ಮಣಿಸಿದರು. ಕರುವಾನಾ ಸ್ವದೇಶದ ಅಮೆರಿಕದ ಹಿಕಾರು ನಕಾಮುರಾ ಅವರನ್ನು ಮಣಿಸಿ 11 ಪಾಯಿಂಟ್ಸ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ.

ADVERTISEMENT

ಮಹಿಳೆಯರ ವಿಭಾಗದಲ್ಲಿ ವೈಶಾಲಿ, ವಿಶ್ವ ಮಹಿಳಾ ಚಾಂಪಿಯನ್ ಚೀನಾದ ವೆಂಜುನ್ ಜು ವಿರುದ್ಧ ಪರಾಭವಗೊಂಡರು.  ವೆಂಜುನ್ ಮತ್ತು ಅನ್ನಾ ಮುಜಿಚುಕ್ ತಲಾ 10.5 ಪಾಯಿಂಟ್ಸ್‌ಗಳೊಂದಿಗೆ ಜಂಟಿ ಅಗ್ರಸ್ಥಾನದಲ್ಲಿದ್ದಾರೆ. ವೈಶಾಲಿ (10) ಎರಡನೇ ಸ್ಥಾನದಲ್ಲಿದ್ದಾರೆ. ಎರಡೂ ವಿಭಾಗಗಳಲ್ಲಿ ಇನ್ನೂ ನಾಲ್ಕು ಸುತ್ತುಗಳು ಬಾಕಿಯಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.