ADVERTISEMENT

ನಾರ್ವೆ ಚೆಸ್‌ | ಕಾರ್ಲ್‌ಸನ್‌ಗೆ ಮಣಿದ ಪ್ರಜ್ಞಾನಂದ: ವೈಶಾಲಿಗೆ ಗೆಲುವು

ನಾರ್ವೆ ಚೆಸ್‌: ವೈಶಾಲಿಗೆ ಗೆಲುವು

ಪಿಟಿಐ
Published 5 ಜೂನ್ 2024, 14:24 IST
Last Updated 5 ಜೂನ್ 2024, 14:24 IST
ಆರ್‌.ವೈಶಾಲಿ
ಪಿಟಿಐ ಚಿತ್ರ
ಆರ್‌.ವೈಶಾಲಿ ಪಿಟಿಐ ಚಿತ್ರ   

ಸ್ಟಾವೆಂಜರ್ (ನಾರ್ವೆ): ಭಾರತದ ಗ್ರ್ಯಾಂಡ್‌ಮಾಸ್ಟರ್‌ ಆರ್‌.ಪ್ರಜ್ಞಾನಂದ ಅವರು ನಾರ್ವೆ ಚೆಸ್‌ ಟೂರ್ನಿಯ ಎಂಟನೇ ಸುತ್ತಿನಲ್ಲಿ ಅಗ್ರ ಶ್ರೆಯಾಂಕದ ಮ್ಯಾಗ್ನಸ್‌ ಕಾರ್ಲ್‌ಸನ್‌ ಅವರಿಗೆ ಸೋತರು. ಅವರ ಅಕ್ಕ ಆರ್‌.ವೈಶಾಲಿ ಮಹಿಳಾ ವಿಭಾಗದ ಪಂದ್ಯದಲ್ಲಿ ಉಕ್ರೇನಿನ ಅನ್ನಾ ಮುಝಿಚುಕ್ ಅವರನ್ನು ಮಣಿಸಿದರು.

ಈ ಗೆಲುವಿನಿಂದಾಗಿ ಅಗ್ರಸ್ಥಾನದಲ್ಲಿ ಮುಂದುವರಿದಿರುವ ಆತಿಥೇಯ ದೇಶದ ಕಾರ್ಲ್‌ಸನ್‌ ತಮ್ಮ ಮುನ್ನಡೆಯ ಅಂತರವನ್ನು ಒಂದು ಪಾಯಿಂಟ್‌ಗೆ ಹಿಗ್ಗಿಸಿದರು. ಕಾರ್ಲ್‌ಸನ್‌ 14.5 ಪಾಯಿಂಟ್ಸ್‌ ಗಳಿಸಿದ್ದಾರೆ. ಅಮೆರಿಕದ ಹಿಕಾರು ನಕಾಮುರ (13.5 ಪಾಯಿಂಟ್ಸ್‌) ಅವರು ಎರಡನೇ ಸ್ಥಾನದಲ್ಲಿದ್ದಾರೆ. ನಕಾಮುರ ಅವರು ಮಂಗಳವಾರ ನಡೆದ ಎಂಟನೇ ಸುತ್ತಿನಲ್ಲಿ ಫ್ರಾನ್ಸ್‌ನ ಅಲಿರೇಝಾ ಫಿರೋಜ್ ಅವರಿಗೆ ಮಣಿದರು. ಪ್ರಜ್ಞಾನಂದ 12 ಪಾಯಿಂಟ್ಸ್ ಗಳಿಸಿದ್ದಾರೆ. ಅಲಿರೇಝಾ (11) ನಂತರದ ಸ್ಥಾನದಲ್ಲಿದ್ದಾರೆ.

ಇದೇ ವೇಳೆ, ವಿಶ್ವ ಚಾಂಪಿಯನ್ ಡಿಂಗ್ ಲಿರೆನ್ ಅವರ ನಿರಾಶಾದಾಯಕ ಪ್ರದರ್ಶನ ಮುಂದುವರಿಯಿತು. ಅವರು ಅಮೆರಿಕದ ಫ್ಯಾಬಿಯಾನೊ ಕರುವಾನಾ ಅವರಿಗೆ ಸೋತರು. 9 ಪಾಯಿಂಟ್ಸ್ ಗಳಿಸಿರುವ ಕರುವಾನಾ ಐದನೇ ಸ್ಥಾನದಲ್ಲಿದ್ದಾರೆ. ಲಿರೆನ್ (4.5) ಕೊನೆಯ ಸ್ಥಾನದಲ್ಲಿದ್ದಾರೆ.

ADVERTISEMENT

ಮಹಿಳೆಯರ ವಿಭಾಗದಲ್ಲಿ, ವಿಶ್ವ ಚಾಂಪಿಯನ್ ಚೀನಾದ ಜು ವೆನ್‌ಜುನ್ ಎಂಟನೇ ಸುತ್ತಿನಲ್ಲಿ ಸ್ವೀಡನ್‌ನ ಪಿಯಾ ಕ್ರಾಮ್ಲಿಂಗ್ ಅವರನ್ನು ಸೋಲಿಸಿ 14.5 ಪಾಯಿಂಟ್‌ಗಳೊಡನೆ ಅಗ್ರಸ್ಥಾನದಲ್ಲಿ ಮುಂದುವರಿದರು.

ಮುಝಿಚುಕ್, ವೈಶಾಲಿ ಅವರಿಗೆ ಸೋತ ಕಾರಣ ವೆನ್‌ಜುನ್ ಅವರ ಅಗ್ರಸ್ಥಾನ ಇನ್ನಷ್ಟು ಸುರಕ್ಷಿತವಾಯಿತು. ಉಕ್ರೇನ್ ಆಟಗಾರ್ತಿ 13 ಪಾಯಿಂಟ್‌ಗಳೊಡನೆ ಎರಡನೇ ಸ್ಥಾನದಲ್ಲಿದ್ದು, ವೈಶಾಲಿ ಮತ್ತು ಚೀನಾದ ಟಿಂಗ್ಜಿ ಲೀ (ತಲಾ 11.5) ಅವರಿಗಿಂತ ಒಂದೂವರೆ ಪಾಯಿಂಟ್ಸ್‌ ಮುಂದಿದ್ದಾರೆ. ಟಿಂಗ್ಜಿ ದಿನದ ಇನ್ನೊಂದು ಪಂದ್ಯದಲ್ಲಿ ಭಾರತದ ಗ್ರ್ಯಾಂಡ್‌ಮಾಸ್ಟರ್ ಕೋನೇರು ಹಂಪಿ ಅವರನ್ನು ಸೋಲಿಸಿದರು. ಹಂಪಿ (8) ಐದನೇ ಸ್ಥಾನದಲ್ಲಿದ್ದಾರೆ. ಕ್ರಾಮ್ಲಿಂಗ್‌ (4.5) ಕೊನೆಯ ಸ್ಥಾನದಲ್ಲಿದ್ದಾರೆ.

ಟೂರ್ನಿಯು ಎರಡೂ ವಿಭಾಗಗಳಲ್ಲಿ ₹1.34 ಕೋಟಿ ಬಹುಮಾನ ನಿಧಿ ಹೊಂದಿದೆ. ಪುರುಷರ ಮತ್ತು ಮಹಿಳಾ ವಿಭಾಗದಲ್ಲಿ ತಲಾ ಆರು ಮಂದಿ ಕಣದಲ್ಲಿದ್ದಾರೆ.

ಪುರುಷರ ವಿಭಾಗದ ಎಲ್ಲ ಮೂರೂ ಪಂದ್ಯಗಳು ‘ಡ್ರಾ’ ಆಗಿದ್ದು, ಟೂರ್ನಿಯ ನಿಯಮಗಳ ಪ್ರಕಾರ ‘ಆರ್ಮ್‌ಗೆಡನ್‌’ ಗೇಮ್‌ ಮೂಲಕ ಫಲಿತಾಂಶ ನಿರ್ಧರಿಸಲಾಯಿತು.

ಪ್ರಜ್ಞಾನಂದ ಮತ್ತು ಕಾರ್ಲ್‌ಸನ್‌ ನಡುವಣ ಕ್ಲಾಸಿಕಲ್‌ ಪಂದ್ಯ ‘ಡ್ರಾ’ ಆದ ನಂತರ ಆರ್ಮ್‌ಗೆಡನ್‌ನ ಮೊದಲ ಪಂದ್ಯ ‘ಡ್ರಾ’ ಆಯಿತು. ಆದರೆ ‘ರಿಟರ್ನ್‌ ಗೇಮ್‌’ನದಲ್ಲಿ ವಿಶ್ವದ ಅಗ್ರಮಾನ್ಯ ಆಟಗಾರನ ಕೌಶಲದ ಮುಂದೆ ಪ್ರಜ್ಞಾನಂದ ಮಣಿಯಬೇಕಾಯಿತು. ಆರ್ಮ್‌ಗೆಡನ್‌ನಲ್ಲಿ ಬಿಳಿ ಕಾಯಿಗಳಲ್ಲಿ ಆಡುವ ಆಟಗಾರನಿಗೆ ಹತ್ತು ನಿಮಿಷ, ಕಪ್ಪು ಕಾಯಿಗಳಲ್ಲಿ ಆಡುವ ಆಟಗಾರನಿಗೆ ಏಳು ನಿಮಿಷಗಳ ಅವಧಿ ಇರುತ್ತದೆ. ಆದರೆ ಬಿಳಿ ಕಾಯಿಗಳಲ್ಲಿ ಆಡುವ ಆಟಗಾರನಿಗೆ ಗೆಲುವು ಅನಿವಾರ್ಯ. ಡ್ರಾ ಆದರೆ ಕಪ್ಪು ಕಾಯಿಗಳಲ್ಲಿ ಆಡುವ ಆಟಗಾರ ವಿಜೇತನಾಗುತ್ತಾನೆ. ಆರ್ಮ್‌ಗೆಡನ್‌ನಲ್ಲಿ ಗೆದ್ದ ಆಟಗಾರ ಒಂದೂವರೆ, ಸೋತ ಆಟಗಾರ ಒಂದು ಪಾಯಿಂಟ್‌ ಗಳಿಸುತ್ತಾನೆ.

ವೈಶಾಲಿ, ಆರ್ಮ್‌ಗೆಡನ್‌ನ ಎರಡನೇ ಪಂದ್ಯದಲ್ಲಿ ಮುಝಿಚುಕ್ ವಿರುದ್ಧ ಗೆದ್ದರು. ರೂಕ್‌ಗಳು ಆಯಕಟ್ಟಿನ ಸ್ಥಾನದಲ್ಲಿದ್ದುದು ಅವರಿಗೆ ವರದಾನವಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.