ಸ್ಟಾವೆಂಜರ್ (ನಾರ್ವೆ): ಭಾರತದ ಗ್ರ್ಯಾಂಡ್‌ಮಾಸ್ಟರ್ ಆರ್.ಪ್ರಜ್ಞಾನಂದ ಅವರು ನಾರ್ವೆ ಚೆಸ್ ಟೂರ್ನಿಯ 9ನೇ ಸುತ್ತಿನಲ್ಲಿ ಫ್ಯಾಬಿಯಾನೊ ಕರುವಾನಾ ಎದುರು ಸೋಲನುಭವಿಸಿದರು. ವಿಶ್ವದ ಅಗ್ರಮಾನ್ಯ ಆಟಗಾರ ಮ್ಯಾಗ್ನಸ್ ಕಾರ್ಲ್‌ಸನ್ ಇನ್ನೊಂದು ಪಂದ್ಯದಲ್ಲಿ ಫ್ರಾನ್ಸ್‌ನ ಅಲಿರೇಝಾ ಫಿರೋಜ್ ಅವರನ್ನು ಸೋಲಿಸಿದರು.
ಕಾರ್ಲ್‌ಸನ್ 16 ಪಾಯಿಂಟ್ಸ್ ಸಂಗ್ರಹಿಸಿದ್ದು, ಎರಡನೇ ಸ್ಥಾನದಲ್ಲಿರುವ ನಕಾಮುರಾ (14.5) ಅವರಿಗಿಂತ ಒಂದೂವರೆ ಪಾಯಿಂಟ್ಸ್ ಮುಂದೆಯಿದ್ದಾರೆ. ಟೂರ್ನಿಯಲ್ಲಿ ನಿರಾಶಾದಾಯಕ ಆಟವಾಡಿದ್ದ ವಿಶ್ವ ಚಾಂಪಿಯನ್ ಡಿಂಗ್ ಲಿರೆನ್ (ಚೀನಾ) ಅವರು ನಕಾಮುರಾ ಅವರಿಗೆ ಸೋಲಿನ ಆಘಾತ ನೀಡಿದರು.
ಕರುವಾನಾ ಅವರಿಗೆ ‘ಆರ್ಮ್‌ಗೆಡನ್’ನಲ್ಲಿ ಸೋತರೂ, ಪ್ರಜ್ಞಾನಂದ (13) ಅವರ ಮೂರನೇ ಸ್ಥಾನಕ್ಕೆ ತೊಂದರೆಯಾಗಿಲ್ಲ. ಅಲಿರೇಝಾ (12), ಕರುವಾನಾ (10.5) ಮತ್ತು ಲಿರೆನ್ (6) ಕ್ರಮವಾಗಿ ನಾಲ್ಕರಿಂದ ಆರರವರೆಗಿನ ಸ್ಥಾನ ಪಡೆದಿದ್ದಾರೆ.
ಮಹಿಳಾ ವಿಭಾಗದಲ್ಲಿ ಆರ್.ವೈಶಾಲಿ ಅವರು ಚೀನಾದ ಟಿಂಗ್ಜೀ ಲೀ ಎದುರು 28 ನಡೆಗಳಲ್ಲಿ ಸೋಲನ್ನು ಕಂಡು ನಾಲ್ಕನೇ ಸ್ಥಾನಕ್ಕೆ ಕುಸಿಯಬೇಕಾಯಿತು. ಭಾರತದ ಇನ್ನೊಬ್ಬ ಆಟಗಾರ್ತಿ ಕೋನೇರು ಹಂಪಿ ಅವರು ಅಗ್ರಸ್ಥಾನದಲ್ಲಿರುವ ಚೀನಾ ಆಟಗಾರ್ತಿ ಜು ವೆನ್‌ಜುನ್ ಅವರಿಗೆ ಮಣಿದರು.
ವೆನ್‌ಜುನ್ 16 ಪಾಯಿಂಟ್ಸ್ ಕಲೆಹಾಕಿ ಮೊದಲ ಸ್ಥಾನದಲ್ಲಿದ್ದಾರೆ. ಟಿಂಗ್ಜಿ ಮತ್ತು ಉಕ್ರೇನ್‌ನ ಅನ್ನಾ ಮುಝಿಚುಕ್ ಇಬ್ಬರೂ ಎರಡನೇ ಸ್ಥಾನ (ತಲಾ 14.5) ಹಂಚಿಕೊಂಡಿದ್ದಾರೆ. ವೈಶಾಲಿ (11.5) ನಾಲ್ಕನೇ ಸ್ಥಾನದಲ್ಲಿದ್ದಾರೆ. ಹಂಪಿ (9) ಮತ್ತು ಸ್ವೀಡನ್‌ನ ಪಿಯಾ ಕ್ರಾಮ್ಲಿಂಗ್ (6.5) ಕೊನೆಯ ಎರಡು ಸ್ಥಾನದಲ್ಲಿದ್ದಾರೆ.
ವೈಶಾಲಿ ಮಾತ್ರ ಕ್ಲಾಸಿಕಲ್ ಪಂದ್ಯದಲ್ಲಿ ಸೋತರು. ಉಳಿದವು ಆರ್ಮ್‌ಗೆಡನ್‌ಗೆ ಬೆಳೆದವು. ಕ್ರಾಮ್ಲಿಂಗ್, ಅನ್ನಾ ಎದುರು ಸೋಲನುಭವಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.